
ಲಂಡನ್ : ಇನ್ಫೋಸಿಸ್ ನಾರಾಯಣ ಮೂರ್ತಿಯರ ಅಳಿಯ ಬ್ರಿಟನ್ನಿನ ಹಣಕಾಸು ಸಚಿವರಾಗಿರುವ ರಿಷಿ ಸುನಾಕ್ ಅವರು ಬ್ರಿಟನ್ನಿನ ಮುಂದಿನ ಪ್ರಧಾನಿಯಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವರು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿರುವ ಕಾರಣ ಬ್ರಿಟನ್ನಿನ ವಿರೋಧ ಪಕ್ಷ ಸೇರಿ ಸ್ವಂತ ಪಕ್ಷೀಯರಿಂದಲೂ ವಿರೋಧ ಎದುರಿಸುತ್ತಿದ್ದಾರೆ. ಪಧಾನಿ ಹುದ್ದೆಯ ಘನತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಬೋರಿಸ್ ಅವರನ್ನು ಇಳಿಸಿ ಹೊಸ ಪ್ರಧಾನಿಯನ್ನು ಆರಿಸುವ ಮಾತುಗಳು ಕೇಳಿಬರುತ್ತಿದ್ದು ರಿಷಿ ಸುನಾಕ್ ಅವರು ಪ್ರಧಾನಿ ಹುದ್ದೆಯ ರೇಸಿನಲ್ಲಿ ಇದ್ದಾರೆ ಎನ್ನಲಾಗಿದೆ.
ಕಳೆದ ಕೊರೋನಾ ಹಾವಳಿ ಸಂದರ್ಭ ಲಾಕ್ ಡೌನ್ ಅವಧಿಯಲ್ಲಿ ಪ್ರಧಾನಿ ಬೋರಿಸ್ ಅವರು ಆಯೋಜಿಸಿದ್ದ ಮದ್ಯದ ಪಾರ್ಟಿ ಎಲ್ಲರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಜತೆಗೆ ೨೦೨೧ರ ಏಪ್ರಿಲಿನಲ್ಲಿ ಬ್ರಿಟನ್ ರಾಜಕುಮಾರ ಫಿಲಿಫ್ ಮರಣಿಸಿದಾಗ ಅಂತ್ಯಕ್ರಿಯೆಯ ಮುನ್ನಾದಿನ ೩೦ ಮಂದಿಯೊಂದಿಗೆ ಡ್ರಗ್ಸ್ ಪಾರ್ಟಿ ಕೂಡ ಮಾಡಿದ್ದರು. ರಾಜಕುಮಾರರ ಪಾರ್ಥಿವ ಶರೀರ ಇರುವಾಗಲೇ ಡ್ರಗ್ಸ್ ಪಾರ್ಟಿ ಮಾಡಿದ್ದು ವಿವಾದ ಸೃಷ್ಟಿಸಿತ್ತು. ಈ ಪಾರ್ಟಿ ವಿವಾದ ಸೃಷ್ಟಿಸಿದ ಬಳಿಕ ಪ್ರಧಾನಿ ಬೋರಿಸ್ ಸಂಸತ್ತಿನಲ್ಲಿ ಕ್ಷಮೆ ಯಾಚನೆ ಮಾಡಿದ್ದರು. ಆದಾಗ್ಯೂ ಬೋರಿಸ್ ಕೆಳಗಿಳಿಯಬೇಕು ಎಂಬ ಕೂಗು ಕಮ್ಮಿಯಾಗಿಲ್ಲ.
ಈ ಎಲ್ಲ ಬೆಳವಣಿಗೆಗಳು ರಿಷಿಯನ್ನು ಪ್ರಧಾನಿ ಹುದ್ದೆಯ ಸನಿಹಕ್ಕೆ ಕರೆ ತಂದಿದ್ದು ಒಂದು ವೇಳೆ ರಿಷಿ ಪ್ರಧಾನಿಯಾದರೆ ರಿಷಿ ಭಾರತೀಯ ಮೂಲದ ಮೊದಲ ಬ್ರಿಟನ್ ಪ್ರಧಾನಿ ಆಗಲಿದ್ದಾರೆ.












































