
ಇಸ್ಲಾಮಾಬಾದ್: ಭಾರತದ ನೆರೆಯ ರಾಷ್ಟ್ರವಾದ ಶ್ರೀಲಂಕಾವು ಆರ್ಥಿಕ ದುಃಸ್ಥಿತಿಯನ್ನು ಈಗಾಗಲೇ ತಲುಪಿದ್ದರೆ ಪಾಕಿಸ್ತಾನವು ಕೂಡ ಅದೇ ಹಾದಿಯಲ್ಲಿ ಹೋಗುತ್ತಿದೆ . ಪಾಕಿಸ್ತಾನದ ರೂಪಾಯಿಯ ಮೌಲ್ಯ ಗಣನೀಯವಾಗಿ ಕುಸಿದಿದ್ದು ಅಮೆರಿಕದ ಡಾಲರ್ ಗೆ ಪ್ರತಿಯಾಗಿ 200 ರೂಪಾಯಿಯನ್ನು ತಲುಪಿದೆ . 2018ರಲ್ಲಿ ಪ್ರತಿ ಡಾಲರ್ ಗೆ 123 ರೂಪಾಯಿ ಇದ್ದ ಪಾಕಿಸ್ತಾನದ ಕರೆನ್ಸಿ ಈಗ 200 ರೂಪಾಯಿಯನ್ನು ತಲುಪಿರುವುದು ಅಲ್ಲಿನ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ. ಪಾಕಿಸ್ತಾನ ಈಗ ಕೆಲವೇ ತಿಂಗಳುಗಳಿಗೆ ಸಾಕಾಗುವಷ್ಟು ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದೆ . ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ ಕೇವಲ 16 ಬಿಲಿಯನ್ ಡಾಲರ್ ಆಗಿದ್ದು, ಇದು ಸುಮಾರು 3 ತಿಂಗಳುಗಳ ಆಮದಿಗೆ ಸಾಕಾಗಬಹುದು.
ಪಾಕಿಸ್ತಾನದ ಸಾಲವೂ ಕೂಡ ಗಣನೀಯವಾಗಿ ಹೆಚ್ಚಾಗಿದ್ದು ಪ್ರತಿ ಪ್ರಜೆ ತನ್ನ ಮೇಲೆ ಸುಮಾರು 2 ಲಕ್ಷ ರೂಪಾಯಿಗಳಷ್ಟು ಸಾಲವನ್ನು ಹೊಂದಿದ್ದಾನೆ. ಇದು ಪಾಕಿಸ್ತಾನದ ಸ್ವಯಂಕೃತಾಪರಾಧ ಎನ್ನದೆ ವಿಧಿ ಇಲ್ಲ. ಏಕೆಂದರೆ ಪಾಕಿಸ್ತಾನ ಭಯೋತ್ಪಾದನೆಗೆ ಸುರಕ್ಷಿತ ತಾಣ ಎನಿಸುವುದರಿಂದ ಅಲ್ಲಿ ವಿದೇಶಿ ಕಂಪನಿಗಳು ಹೂಡಿಕೆಯನ್ನು ಮಾಡಲು ಸಿದ್ಧವಾಗುತ್ತಿಲ್ಲ. 2013ರಿಂದ ಕೇವಲ ಚೀನಾದ ಕಂಪನಿಗಳು ಮಾತ್ರ ಇಲ್ಲಿ ಹೂಡಿಕೆಯನ್ನು ಮಾಡುತ್ತಿವೆ.
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೀಗೆ ಮುಂದುವರಿದಿದ್ದರೆ ಇತ್ತ ಇತ್ತೀಚೆಗಷ್ಟೇ ಪದಚ್ಯುತಗೊಂಡಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೇವಲ ಆರು ದಿನಗಳಲ್ಲಿ ಚುನಾವಣೆಯನ್ನು ನಡೆಸಿ ಇಲ್ಲದೆ ಹೋದರೆ ರಾಜಧಾನಿಯನ್ನು ಮುತ್ತಿಗೆ ಹಾಕುತ್ತೇವೆ ಎನ್ನುವ ಬೆದರಿಕೆಯನ್ನು ಒಡ್ಡಿದ್ದಾರೆ. ಇದು ಆರ್ಥಿಕವಾಗಿ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.