National

ದಿವಾಳಿಯಾದ ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ, ಸರ್ಜರಿಗಳೇ ಸ್ಥಗಿತ: ರೋಗಿಗಳು ಸಾವು

ಇಸ್ಲಾಮಾಬಾದ್/ಪಾಕಿಸ್ತಾನ: ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು ಅಲ್ಲಿನ ಆರ್ಥಿಕ ಬಿಕ್ಕಟ್ಟುಇದೀಗ ಆಸ್ಪತ್ರೆಗಳ ಮೇಲೂ ಪರಿಣಾಮ ಬೀರಿದೆ. ಅವಶ್ಯಕವಾದ ಔಷಧಗಳು ಸಿಗದೇ ರೋಗಿಗಳು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಔಷಧ ಕೊರತೆಯ ಪರಿಣಾಮ ಹಲವು ಆಸ್ಪತ್ರೆಗಳಲ್ಲಿ ಸರ್ಜರಿಗಳನ್ನೇ ಸ್ಥಗಿತಗೊಳಿಸಲಾಗಿದೆ.

ವಿದೇಶ ವಿನಿಮಯ ಮೀಸಲು ಕೊರತೆಯು ಅಗತ್ಯ ಔಷಧಗಳ ಉತ್ಪಾದನೆಯಲ್ಲಿ ಬಳಸುವ ಮೂಲ ವಸ್ತುಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದಾಗಿ ಸ್ಥಳೀಯ ಔಷಧ ಉತ್ಪಾದಕರು ತಮ್ಮ ಉತ್ಪಾದನೆಯನ್ನು ತಗ್ಗಿಸುವಂತಾಗಿದೆ. ಹೃದಯ, ಕ್ಯಾನ್ಸರ್ ಮತ್ತು ಕಿಡ್ನಿಯಂತಹ ಸರ್ಜರಿಗಳಿಗೆ ಅಗತ್ಯವಾದ ಅನಸ್ತೇಶಿಯಾ ಸಂಗ್ರಹವು ಎರಡು ವಾರಗಳಿಗೆ ಬೇಕಾಗುವಷ್ಟು ಇವೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದಲ್ಲಿ ಔಷಧ ಉತ್ಪಾದನೆಯು ಆಮದು ಮೇಲೆ ಅವಲಂಬಿತವಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಡಾಲರ್‌ಗಳ ಕೊರತೆಯ ಕಾರಣ, ಔಷಧ ಉತ್ಪಾದಕರಿಗೆ ಬೇಕಿರುವ ಆಮದು ಮೂಲ ವಸ್ತುಗಳನ್ನು ಕರಾಚಿ ಬಂದರಿನಲ್ಲಿ ತಡೆಹಿಡಿಯಲಾಗಿದೆ. ಜತೆಗೆ ಔಷಧ ತಯಾರಿಕೆಯ ವೆಚ್ಚ ನಿರಂತರ ಏರಿಕೆಯಾಗುತ್ತಿದೆ. ಪರಿಸ್ಥಿತಿಯು ಕೈಮೀರುವುದನ್ನು ತಡೆಯಲು ಪಾಕ್ ಸರ್ಕಾರ ಮಧ್ಯಪ್ರವೇಶ ಮಾಡುವಂತೆ ಪಾಕಿಸ್ತಾನದ ವೈದ್ಯಕೀಯ ಸಂಸ್ಥೆ (ಪಿಎಂಎ) ಮನವಿ ಮಾಡಿದೆ.

ಸಾಮಾನ್ಯ ಬಳಕೆಯ ಪ್ಯಾನಾಡೋಲ್, ಇನ್ಸುಲಿನ್, ಬ್ರುಫೆನ್, ಡಿಸ್ಪ್ರಿನ್, ಕಾಲ್‌ಪಾಲ್, ಟೆಗ್ರಾಲ್, ಹೆಪಾಮೆರ್ಜ್, ಬುಸ್ಕೋಪಾನ್, ರಿವೋಟ್ರಿಲ್ ಮುಂತಾದ ಔಷಧಗಳು ಕೂಡ ಜನರಿಗೆ ಲಭಿಸುತ್ತಿಲ್ಲ. ಜ್ವರ, ನೆಗಡಿಯಂತಹ ರೋಗಕ್ಕೆ ತುತ್ತಾದ ಜನರು ಕೂಡ ಸಂಕಷ್ಟಕ್ಕೆ ಒಳಗಾಗುವಂತಾಗಿದೆ.

Exit mobile version