
ಹೈದರಾಬಾದ್: ಹಿರಿಯ ವಿದ್ಯಾರ್ಥಿಯ ಸತತ ರ್ಯಾಗಿಂಗ್ನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪಿಜಿ ವೈದ್ಯಕೀಯ ವಿದ್ಯಾರ್ಥಿನಿ 26 ವರ್ಷದ ಧಾರಾವತಿ ಪ್ರೀತಿ ಭಾನುವಾರ ರಾತ್ರಿ ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ನಿಮ್ಸ್) ಮೃತಪಟ್ಟಿದ್ದಾರೆ.
ಕಾಕತೀಯ ವೈದ್ಯಕೀಯ ಕಾಲೇಜಿನ(ಕೆಎಂಸಿ) ವಿದ್ಯಾರ್ಥಿನಿಯಾಗಿದ್ದ ಧಾರಾವತಿ ಪ್ರೀತಿ ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಎಂಡಿ ಸೈಫ್ ಎಂಬಾತನಿಂದ ಸತತ ಕಿರುಕುಳಕ್ಕೆ ಒಳಗಿ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು ಎಳೆದಿದ್ದಾರೆ.
ಕಾಕತೀಯ ವೈದ್ಯಕೀಯ ಕಾಲೇಜಿನಲ್ಲಿ ಅನಸ್ತೇಶಿಯಾ ವಿಭಾಗದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ಪ್ರೀತಿಗೆ ಕಳೆದ ಮೂರು ತಿಂಗಳಿನಿಂದ ಎರಡನೇ ವರ್ಷದ ವಿದ್ಯಾರ್ಥಿ ಡಾ.ಸೈಫ್ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಶುಕ್ರವಾರ ಮತ್ತೇವಾಡ ಪೊಲೀಸರು ಸೈಫ್ ನನ್ನು ಬಂಧಿಸಿದ್ದು ಆತನ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸೈಫ್ ನನ್ನು ವಾರಂಗಲ್‌ನ 3ನೇ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಖಮ್ಮಂ ಜೈಲಿಗೆ ಸ್ಥಳಾಂತರಿಸಲಾಗಿದೆ.
ಧಾರಾವತಿ ಪ್ರೀತಿ ನಿಧನಕ್ಕೆ ತೆಲಂಗಾಣ ಆರೋಗ್ಯ ಸಚಿವ ಟಿ ಹರೀಶ್ ರಾವ್ ಸಂತಾಪ ಸೂಚಿಸಿ ಸರ್ಕಾರದ ಕಡೆಯಿಂದ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ನಮ್ಮ ವಾಟ್ಸಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ : https://chat.whatsapp.com/CMUDdTXoFVn7atm3zHYGrd