
ನವದೆಹಲಿ: ತಾಲೀಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಫ್ಘಾನಿನಿಂದ ಭಾರತಕ್ಕೆ ವಲಸೆ ಬಂದಿರುವ ಅಫ್ಘಾನ್ ಸಿಖ್ ಮತ್ತು ಹಿಂದೂಗಳ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ನಿವಾಸದಲ್ಲಿ ಭೇಟಿ ಮಾಡಿದರು. ಅಫ್ಘಾನಿಸ್ತಾನದಿಂದ ಸಿಖ್ಖರು ಮತ್ತು ಹಿಂದೂಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದಕ್ಕಾಗಿ ನಿಯೋಗದ ಸದಸ್ಯರು ಪ್ರಧಾನಿ ಮೋದಿಯವರನ್ನು ಗೌರವಿಸಿ ಧನ್ಯವಾದಗಳನ್ನು ಅರ್ಪಿಸಿದರು.
ನಿಯೋಗವನ್ನು ಸ್ವಾಗತಿಸಿ ಮಾತನಾಡಿದ ಪ್ರಧಾನಿ ಮೋದಿಯವರು, “ಅಫ್ಘಾನ್ ಹಿಂದೂ ಹಾಗು ಸಿಖ್ಖರು ಭಾರತದಲ್ಲಿ ಅತಿಥಿಗಳಲ್ಲ. ಅವರುಗಳು ಅವರ ಸ್ವಂತ ಮನೆಯಲ್ಲಿದ್ದಾರೆ ಎಂದು ಹೇಳಿದರು. ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ತೊಂದರೆಗಳು ಹಾಗು ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಭಾರತ ಸರ್ಕಾರ ನೀಡಿದ ಸಹಾಯದ ಬಗ್ಗೆ ಮೋದಿ ವಿವರಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಮಹತ್ವ ಮತ್ತು ಸಮುದಾಯಕ್ಕೆ ಅದರ ಪ್ರಯೋಜನಗಳ ಬಗ್ಗೆ ವಿವರಿಸಿದ ಪ್ರಧಾನಿ ಮೋದಿ ದೇಶದಿಂದ ಹೊರಗಿರುವ ಹಿಂದೂ ಸಿಖ್ಖರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳು ಮತ್ತು ತೊಂದರೆಗಳನ್ನು ಪರಿಹರಿಸಲು ಭವಿಷ್ಯದಲ್ಲಿ ಅವರಿಗೆ ನಿರಂತರ ಬೆಂಬಲವನ್ನು ನೀಡುವ ಭರವಸೆ ನೀಡಿದರು.