National

ಕುತುಬ್ ಮಿನಾರ್ ವಾಸ್ತವವಾಗಿ ‘ವಿಷ್ಣು ಸ್ತಂಭ’, 27 ಹಿಂದೂ ಜೈನ ದೇವಾಲಯಗಳನ್ನು ಕೆಡವಿ ನಿರ್ಮಿಸಲಾಗಿದೆ: ವಿಶ್ವ ಹಿಂದೂ ಪರಿಷತ್

ನವದೆಹಲಿ: ದೆಹಲಿಯ ಸ್ಮಾರಕ ಕುತುಬ್ ಮಿನಾರ್ ನಿಜವಾಗಿ ‘ವಿಷ್ಣು ಸ್ತಂಭ’ ಎಂದು ವಿಶ್ವ ಹಿಂದೂ ಪರಿಷತ್ ವಕ್ತಾರ ವಿನೋದ್ ಬನ್ಸಾಲ್ ಅವರು ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡುತ್ತಾ ಈ ವಿಚಾರವನ್ನು ಹೊರ ಹಾಕಿದರು.

ಕುತುಬ್ ಮಿನಾರ್ ಅನ್ನು 27 ಹಿಂದೂ-ಜೈನ ದೇವಾಲಯಗಳನ್ನು ಕೆಡವಿ ಪಡೆದ ವಸ್ತುಗಳಿಂದ ನಿರ್ಮಿಸಲಾಗಿದೆ ಹಾಗು ಹಿಂದೂ ಸಮುದಾಯವನ್ನು ಗೇಲಿ ಮಾಡಲು ನಿರ್ಮಿಸಲಾಗಿದೆ. ಕುತಬ್ ಮಿನಾರ್ ವಾಸ್ತವವಾಗಿ ‘ವಿಷ್ಣು ಸ್ತಂಭ’ ಆಗಿತ್ತು. ಈ ಹಿಂದೆ ಈ ಸ್ಥಳದಲ್ಲಿ ಕೆಡವಲಾದ ಎಲ್ಲಾ 27 ದೇವಾಲಯಗಳನ್ನು ಮರುನಿರ್ಮಾಣ ಮಾಡಬೇಕು ಮತ್ತು ಹಿಂದೂಗಳಿಗೆ ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ವಿನೋದ್ ಬನ್ಸಾಲ್ ಹೇಳಿದ್ದಾರೆ.

ಕುತುಬ್ ಮಿನಾರ್ ಕಾಂಪ್ಲೆಕ್ಸ್‌ನಲ್ಲಿರುವ ಪುರಾತನ ದೇವಾಲಯಗಳನ್ನು ಪುನರ್ನಿರ್ಮಿಸಿ ಅಲ್ಲಿ ಹಿಂದೂ ಧಾರ್ಮಿಕ ವಿಧಿಗಳು ಮತ್ತು ಪ್ರಾರ್ಥನೆಗಳನ್ನು ಪುನರಾರಂಭಿಸಲು ವಿಎಚ್‌ಪಿ ಒತ್ತಾಯಿಸಿದ ಒಂದು ದಿನದ ನಂತರ ಬನ್ಸಾಲ್ ಅವರ ಹೇಳಿಕೆ ಬಂದಿದೆ. ವಿನೋದ್ ಬನ್ಸಾಲ್ ಸೇರಿದಂತೆ ವಿಎಚ್‌ಪಿ ನಾಯಕರು ಸ್ಮಾರಕದ ಆವರಣಕ್ಕೆ ಭೇಟಿ ನೀಡಿದ್ದರು. ಕುತುಬ್ ಮಿನಾರ್ ಸಂಕೀರ್ಣದಲ್ಲಿ ಗಣೇಶ ಮೂರ್ತಿಗಳನ್ನು ಅಗೌರವದಿಂದ ಇರಿಸಲಾಗಿದೆ ಎಂದು ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ (ಎನ್‌ಎಂಎ) ಅಧ್ಯಕ್ಷ ಮತ್ತು ಬಿಜೆಪಿ ನಾಯಕ ತರುಣ್ ವಿಜಯ್ ಗುರುವಾರ ಹೇಳಿದ್ದಾರೆ. ವಿಜಯ್ ಅವರು ಒಂದು ವರ್ಷದ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯೊಂದಿಗೆ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಅವರ ಪತ್ರಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ.

ದೆಹಲಿ ಪ್ರವಾಸೋದ್ಯಮ ವೆಬ್‌ಸೈಟ್ ಪ್ರಕಾರ ಕುವ್ವಾತ್-ಉಲ್-ಇಸ್ಲಾಂ ಮಸೀದಿ ಪೂರ್ವ ದ್ವಾರದ ಮೇಲಿರುವ ಶಾಸನವು “ದೇಗುಲಗಳನ್ನು ಕೆಡವಿದಾಗ ಪಡೆದ ವಸ್ತುಗಳಿಂದ ನಿರ್ಮಿಸಲಾಗಿದೆ” ಎಂದು ಪ್ರಚೋದನಕಾರಿಯಾಗಿ ತಿಳಿಸುತ್ತದೆ. ದೆಹಲಿಯ ಮೊದಲ ಮುಸ್ಲಿಂ ಆಡಳಿತಗಾರ ಕುತಾಬ್-ಉದ್-ದಿನ್ ಐಬಕ್ ಕ್ರಿಸ್ತ ಶಕ ೧೨೦೦ರಲ್ಲಿ ಕುತಾಬ್ ಮಿನಾರ್ ನಿರ್ಮಾಣವನ್ನು ಪ್ರಾರಂಭಿಸಿದನು. ಆದರೆ ನೆಲಮಾಳಿಗೆಯನ್ನು ಮಾತ್ರ ಪೂರ್ಣಗೊಳಿಸಲು ಸಾಧ್ಯವಾಯಿತು. ಅವನ ಉತ್ತರಾಧಿಕಾರಿಯಾದ ಇಲ್ತುಮುಶ್ ಇನ್ನೂ ಮೂರು ಮಹಡಿಗಳನ್ನು ಸೇರಿಸಿದನು ಮತ್ತು 1368 ರಲ್ಲಿ ಫಿರೋಜ್ ಷಾ ತುಘಲಕ್ ಐದನೇ ಮತ್ತು ಕೊನೆಯ ಅಂತಸ್ತಿನ ಕಾಮಗಾರಿಯನ್ನು ನೆರವೇರಿಸಿದನು ಎಂದು ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

Exit mobile version