
ಹೊಸದಿಲ್ಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಭಾನುವಾರ ಸಂಜೆ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ. ಎಬಿವಿಪಿ ರಾಮನವಮಿ ಪ್ರಯುಕ್ತ ಹವನವನ್ನು ಆಯೋಜಿಸಿದ್ದ ಸಂದರ್ಭ ಹಾಸ್ಟೆಲ್‌ನಲ್ಲಿ ಮಾಂಸಾಹಾರಿ ಆಹಾರವನ್ನು ನೀಡಿದ್ದಕ್ಕಾಗಿ ಈ ಘರ್ಷಣೆ ನಡೆದಿದೆ. ಗಾಯಾಳು 15 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಭಾನುವಾರ ಕಾವೇರಿ ಹಾಸ್ಟೆಲ್‌ನಲ್ಲಿ ರಾಮನವಮಿ ಪ್ರಯುಕ್ತ ಹವನ ಆಯೋಜಿಸಿತ್ತು. ಹವನದ ಕಾರಣ ನೀಡಿ ವಾರಾಂತ್ಯದ ಆಹಾರ ಮೆನುವಿನಲ್ಲಿರುವ ಮಾಂಸಾಹಾರವನ್ನು ಬೇಯಿಸಲು ಎಬಿವಿಪಿ ಅನುಮತಿಸುತ್ತಿಲ್ಲ ಎಂದು ಎಡಪಂಥೀಯ ವಿದ್ಯಾರ್ಥಿ ಗುಂಪು ಆರೋಪಿಸಿದೆ. ಹಾಸ್ಟೆಲ್ ನಿವಾಸಿಗಳ ಪ್ರಕಾರ ಶನಿವಾರದಿಂದಲೇ ಮಾಂಸಾಹಾರಿ ಆಹಾರದ ಸಮಸ್ಯೆ ಪ್ರಾರಂಭವಾಯಿತು. ಆಹಾರ ಪೂರೈಕೆದಾರರು ಭಾನುವಾರ ಹಾಸ್ಟೆಲ್‌ಗೆ ಬಂದಿದ್ದರು. ಆದರೆ ಎಬಿವಿಪಿ ಕಾರ್ಯಕರ್ತರು ಅವರನ್ನು ವಾಪಸು ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಎಡಪಂಥೀಯ ವಿದ್ಯಾರ್ಥಿ ಗುಂಪು ತಮ್ಮ “ಆಹಾರದ ಹಕ್ಕನ್ನು” ಕಸಿಯಲಾಗುತ್ತಿದೆ ಎಂದು ಆರೋಪಿಸಿ ಸಭೆಯನ್ನು ನಡೆಸಿತು. ಮತ್ತು ಎಬಿವಿಪಿ ಕಾರ್ಯಕರ್ತರ ಹವನದ ವೇಳೆ ವಾಗ್ವಾದ ಪ್ರಾರಂಭಿಸಿತು. ವಾಗ್ವಾದ ಮುಂದಕ್ಕೆ ಘರ್ಷಣೆಗೆ ತಿರುಗಿತು. ಕನಿಷ್ಠ 15 ಜನರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಮಾಜಶಾಸ್ತ್ರದ ವಿದ್ಯಾರ್ಥಿನಿ ಅಖ್ತರಿಷ್ಟಾ ಅವರ ತಲೆಯ ಮೇಲೆ-ಕಣ್ಣಿನಿಂದ ಸ್ವಲ್ಪ ಮೇಲಕ್ಕೆ- ಗಾಯಗೊಂಡು ರಕ್ತಸ್ರಾವವಾಗುತ್ತಿತ್ತು. ಆ್ಯಂಬುಲೆನ್ಸ್‌ಗಾಗಿ ಕಾಯುತ್ತಿದ್ದೇನೆ’ ಎಂದು ಕಾಲಿಗೆ ಗಾಯ ಮಾಡಿಕೊಂಡು ಕುಂಟುತ್ತಾ ಸಾಗುತ್ತಿದ್ದ ಹಾಸ್ಟೆಲ್‌ನ ನಿವಾಸಿ ನಿತೀಶ್ ಹೇಳಿದರು. ಕೆಲವರಿಗೆ ಹಣೆಯ ಮೇಲೆ ಗಾಯಗಳಾಗಿವೆ, ಹೊಲಿಗೆ ಹಾಕಲಾಗಿದೆ. ಯಾರಿಗೂ ತೀವ್ರ ಗಾಯಗಳಾಗಿಲ್ಲ ಎಂದು ಸಫ್ದರ್‌ಜಂಗ್ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಬಿವಿಪಿ ಕಾರ್ಯಕರ್ತ ಶೇಷ್ ಮಣಿ ಮಾತನಾಡಿ, ಎಡಪಂಥೀಯರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ, ನಾವು ಹವನ ಮಾಡಲು ಬಯಸಿದ್ದೇವೆ ಮತ್ತು ಶಾಂತಿಯುತವಾಗಿ ಮಾಡಲು ಅವಕಾಶ ಮಾಡಿಕೊಡಿ ಎಂದು ಹೇಳಲು ಬಯಸಿದ್ದೇವೆ ಎಂದು ಹೇಳಿದರು.