
ಮಾಸ್ಕೊ: ಅಂತರರಾಷ್ಟ್ರೀಯ ಒತ್ತಡಗಳ ಮಧ್ಯೆಯೂ ಯಾವುದಕ್ಕೂ ಗಮನ ಕೊಡದ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ್ದಾರೆ. ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಪುಟಿನ್ ಅವರು ಉಕ್ರೇನ್ ನ ಮಿಲಿಟರಿಗೆ ಕರೆ ನೀಡಿದ್ದಾರೆ. ಇತ್ತ ಉಕ್ರೇನ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
ರಷ್ಯಾ-ಉಕ್ರೇನ್ ನಡುವಣ ಮಿಲಿಟರಿ ಕಾರ್ಯಾಚರಣೆಯಲ್ಲಿ ಅನ್ಯ ದೇಶಗಳು ಮಧ್ಯೆ ಪ್ರವೇಶಿಸಿದರೆ ಅವರ ವಿರುದ್ಧ ಕೂಡ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ವ್ಲಾಡಿಮಿರ್ ಪುಟಿನ್ ಅಮೇರಿಕ ಸಹಿತ ಅನ್ಯ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದರ ಬೆನ್ನಲ್ಲೇ ರಷ್ಯಾ ಯುದ್ಧ ವಿಮಾನಗಳು ಉಕ್ರೇನ್ ನ ಕೆಲ ಪ್ರದೇಶಗಳಲ್ಲಿ ಬಾಂಬ್ ಧಾಳಿ ನಡೆಸಿದೆ. ರಷ್ಯಾದ ಭೂ ಸೇನಾ ಪಡೆಗಳು ಮತ್ತು ರಷ್ಯಾದ ಟ್ಯಾಂಕ್‌ಗಳು ಗುರುವಾರ ಹಲವಾರು ದಿಕ್ಕುಗಳಿಂದ ಉಕ್ರೇನ್ ಗಡಿ ದಾಟಿವೆ ಎಂದು ಉಕ್ರೇನ್‌ನ ಗಡಿ ಕಾವಲು ಸೇನೆ ಹೇಳಿಕೊಂಡಿದೆ. ಉಕ್ರೇನ್ ಗೆ ಸೇರಿದ ರಕ್ಷಣಾ ವಾಯುನೆಲೆಗಳನ್ನು ಧ್ವಂಸ ಮಾಡಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.
ರಷ್ಯಾದ ಶೆಲ್ ದಾಳಿಯಿಂದ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ, 9 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಹೇಳಿದೆ. ಇನ್ನು ಉಕ್ರೇನ್ ತಾನು ರಷ್ಯಾದ 5 ವಿಮಾನಗಳನ್ನು ,ಮತ್ತು 1 ಸೇನಾ ಹೆಲಿಕಾಪ್ಟರ್ ಅನ್ನು ಹೊಡೆದು ಉರುಳಿಸಿರುವುದಾಗಿ ಹೇಳಿಕೊಂಡಿದೆ. ರಷ್ಯಾ ಧಾಳಿಯ ಬೆನ್ನಲ್ಲೇ ಡಾನ್ಬಾಸ್ ಪ್ರದೇಶದಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಉಕ್ರೇನ್ ಘೋಷಿಸಿದ್ದು, ರಷ್ಯಾದ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಹೊಡೆದುರುಳಿಸಲಾಗಿದೆ ಎಂದು ಹೇಳಿಕೊಂಡಿದೆ.
(ಗುಣಮಟ್ಟದ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್ ಅಲ್ಲಿ ಪಡೆಯಲು ನಮ್ಮ ವಾಟ್ಸಾಪ್ ಗುಂಪಿಗೆ ಸೇರಿರಿ. ಲಿಂಕ್ : https://chat.whatsapp.com/GcMFEE9n0iP0mgfzL9qqyH )












































