National

ತಮಿಳುನಾಡು: ಐಸಿಸ್ ನಂಟಿನವನಿಂದ ಕಾರು ಸ್ಫೋಟ ಪ್ರಕರಣ, ಬಂಧಿತ 5 ಮಂದಿ ವಿರುದ್ಧ ಯುಎಪಿಎ ಅಡಿ ಪ್ರಕರಣ

ಚಿತ್ರ: ಗ್ಯಾಸ್ ಸಿಲಿಂಡರಿನ ಮೂಲಕ ಸ್ಫೋಟಿಸಿದ ಕಾರು ಹಾಗು ಸ್ಪೋಟದಲ್ಲಿ ಮೃತನಾದ ಜಿಹಾದಿ ಮುಬಿನ್

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಹಿಂದೂ ದೇಗುಲ ಮುಂಭಾಗ ನಡೆದ ಕಾರ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐವರು ವ್ಯಕ್ತಿಗಳ ವಿರುದ್ಧ ಕಠಿಣವಾದ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸ್ಫೋಟದಲ್ಲಿ ಐಸಿಸ್ ನಂಟಿದೆ ಎಂದು ಹೇಳಲಾದ ಮುಬಿನ್ ಮೃತಪಟ್ಟಿದ್ದ. ಹಾಗು ಈತನ ಮೇಲೆ ಈ ಹಿಂದೆ 2019ರಲ್ಲಿ ಏನ್ ಐ ಎ ತಂಡ ವಿಚಾರಣೆ ನಡೆಸಿತ್ತು.

ಈ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಭಯೋತ್ಪಾದನೆಯ ಆಯಾಮವೂ ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮೃತ ಮುಬಿನ್ ನಿವಾಸದಲ್ಲಿ ನಡೆಸಿದ ಶೋಧದಲ್ಲಿ ಪೊಟ್ಯಾಸಿಯಮ್ ನೈಟ್ರೇಟ್, ಅಲ್ಯುಮಿನಿಯಂ ಪೌಡರ್, ಸಲ್ಫರ್ ಮತ್ತು ಇದ್ದಿಲು ಸೇರಿದಂತೆ ದೊಡ್ಡ ಪ್ರಮಾಣದ ಕಡಿಮೆ ತೀವ್ರತೆಯ ಸ್ಫೋಟಕಗಳು ಪತ್ತೆಯಾಗಿವೆ.

ಈಗ ೫ ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರನ್ನು ಮುಹಮ್ಮದ್ ತಲ್ಕಾ, ಮುಹಮ್ಮದ್ ಅಜರುದ್ದೀನ್, ಮುಹಮ್ಮದ್ ರಿಯಾಜ್, ಫಿರೋಜ್ ಇಸ್ಮೈಲ್, ಮುಹಮ್ಮದ್ ನವಾಜ್ ಇಸ್ಮಾಯಿಲ್ ಎಂದು ಗುರುತಿಸಲಾಗಿದ್ದು ಎಲ್ಲರೂ 20 ವರ್ಷಗಳ ಆಸು ಪಾಸಿನ ವಯಸ್ಸಿನವರಾಗಿದ್ದಾರೆ. ಇವರಲ್ಲಿ ಕೆಲವರನ್ನು ಎನ್ಐಎ 2019 ರಲ್ಲಿಯೂ ವಿಚಾರಣೆಗೆ ಒಳಪಡಿಸಿತ್ತು, ಆ ಬಳಿಕ ಪೊಲೀಸರೂ ಅವರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ವಿ ಬಾಲಕೃಷ್ಣನ್ ಹೇಳಿದ್ದಾರೆ.

ಬಂಧಿತರ ವಿರುದ್ಧ ಯುಎಪಿಎ ಹಾಗೂ ಪಿತೂರಿಯೇ ಮೊದಲಾದ ಇನ್ನಿತರ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version