National

2 ದಿನದಲ್ಲಿ ಪ್ರಧಾನಿ ಭೇಟಿ ಹಿನ್ನಲೆ ಹೆಚ್ಚಿದ ಉಗ್ರ ಚಟುವಟಿಕೆ: ಕಾಶ್ಮೀರದಲ್ಲಿ 3 ಉಗ್ರರ ಎನ್ಕೌಂಟರ್, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಜಮ್ಮು ಮತ್ತು ಕಾಶ್ಮೀರ: ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ಕಾಶ್ಮೀರ ಭೇಟಿಗೆ 2 ದಿನಗಳಿರುವಾಗ ಉಗ್ರರ ಚಟುವಟಿಕೆಗಳು ಹೆಚ್ಚಾಗಿದ್ದು, ಇಂದು ನಡೆದ ಸೇನಾಪಡೆಗಳ ಕಾರ್ಯಾಚರಣೆಯಲ್ಲಿ ಮೂರು ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದೆ.

ಜಮ್ಮುವಿನ ಸುಂಜ್ವಾನ್ ಪ್ರದೇಶದಲ್ಲಿ ನಡೆಯುತ್ತಿರುವ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಓರ್ವ ಭದ್ರತಾ ಪಡೆಯ ಯೋಧ ಹುತಾತ್ಮರಾಗಿದ್ದು, ಇತರೆ 7 ಮಂದಿ ಗಾಯಗೊಂಡಿದ್ದಾರೆ. ಪ್ರತಿದಾಳಿಯಲ್ಲಿ ಮೂರು ಉಗ್ರರು ಹತರಾಗಿದ್ದಾರೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ ಸಿಂಗ್ ತಿಳಿಸಿದ್ದಾರೆ.

ಘಟನೆ ವಿವರ : ಜಮ್ಮುವಿನ ಚಡ್ಡಾ ಕ್ಯಾಂಪ್ ಬಳಿ ಬೆಳಗ್ಗೆ ಸುಮಾರು 4.25 ಗಂಟೆಗೆ ಬೆಳಗಿನ ಪಾಳಿಯ ಕರ್ತವ್ಯಕ್ಕೆ ತೆರಳುತ್ತಿದ್ದ 15 ಸಿಐಎಸ್‌ಎಫ್ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಪ್ರತಿಧಾಳಿ ಸಂಘಟಿಸಿದ ಸಿಐಎಸ್ಎಫ್ ಪಡೆ ಭಯೋತ್ಪಾದಕರನ್ನು ಹೊಡೆದುರುಳಿಸಿತು. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು ಮತ್ತಷ್ಟು ಉಗ್ರರಿಗಾಗಿ ಹುಡುಕಾಟ ಮುಂದುವರೆದಿದೆ.

ಘಟನಾ ಪ್ರದೇಶದಿಂದ 2 ಎಕೆ-47 ರೈಫಲ್‌ಗಳು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು, ಸ್ಯಾಟೆಲೈಟ್ ಫೋನ್‌ಗಳು ಮತ್ತು ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Exit mobile version