
ವಾಷಿಂಗ್ಟನ್: ಭಾರತದ ಹಲವು ದೇಗುಲಗಳಿಂದ ಕಳವು ಮಾಡಿ ಅಮೆರಿಕಾಗೆ ಸಾಗಿಸಿ, ಅಲ್ಲಿ ಸೀಜ್ ಮಾಡಲಾಗಿದ್ದ ಹಲವು ಪ್ರಾಚೀನ ವಿಗ್ರಹ ಹಾಗೂ ಕಲಾಕೃತಿಗಳನ್ನು ಅಮೆರಿಕ ನರೇಂದ್ರ ಮೋದಿಯವರ ಭೇಟಿಯ ಸಂದರ್ಭದಲ್ಲಿ ಭಾರತಕ್ಕೆ ಹಸ್ತಾಂತರಿಸಿದೆ.
12ನೇ ಶತಮಾನದ ತಾಮ್ರದಿಂದ ತಯಾರಿಸಿದ ನಟರಾಜ ವಿಗ್ರಹ, 10ನೇ ಶತಮಾನದ ರೇವಾಂತ ಕಲ್ಲಿನ ವಿಗ್ರಹ, 11 ರಿಂದ 14ನೇ ಶತಮಾನದ ಹಲವು ಕಲಾಕೃತಿಗಳು ಸೇರಿದಂತೆ ಒಟ್ಟು157 ಕಲಾಕೃತಿಗಳನ್ನು ಭಾರತದ್ದು ಎಂದು ಗುರುತಿಸಿ ಹಸ್ತಾಂತರಿಸಲಾಗುತ್ತಿದೆ. ಸುಮಾರು 71 ಸಾಂಸ್ಕೃತಿಕ ಕಲಾಕೃತಿಗಳು, 60 ಹಿಂದೂ ಧರ್ಮಕ್ಕೆ ಸಂಬಂಧಿಸಿದ ಕಲಾಕೃತಿ, ಬೌದ್ಧ ಮತಕ್ಕೆ ಸೇರಿದ 16 ಹಾಗೂ ಜೈನ ಮತಕ್ಕೆ ಸೇರಿದ 9 ಕಲಾಕೃತಿಗಳು ಇದರಲ್ಲಿ ಸೇರಿವೆ.
2019ರಲ್ಲಿ ಭಾರತದ ಪ್ರಾಚ್ಯ ವಸ್ತು ಇಲಾಖೆಯ ತಂಡವು ನ್ಯೂ ಯಾರ್ಕ್ ಗೆ ಭೇರಿ ನೀಡಿ ಈ ಎಲ್ಲ ವಸ್ತುಗಳನ್ನು ಗುರುತಿಸುವ ಕೆಲಸ ಮಾಡಿತ್ತು. ಇವನ್ನು ಭಾರತದ ತಮಿಳುನಾಡಿನ ಹಾಗೂ ಮಧ್ಯ ಪ್ರದೇಶದ ದೇಗುಲಗಳಿಂದ ಕಳುವು ಮಾಡಿ ಸ್ಮಗಲ್ ಮಾಡಲಾಗಿತ್ತು.
ಭಾರತೀಯ ಪ್ರಾಚ್ಯ ವಸ್ತು ತಂಡದ ಅಧಿಕಾರಿ ಊರ್ಮಿಳಾ ಸಂತ್ ಪ್ರಕಾರ, 5ನೇ ಹಾಗೂ 6ನೇ ಶತಮಾನದ ಗುಪ್ತರ ಕಾಲದ ವಿಗ್ರಹಗಳು ಸೇರಿದಂತೆ ಹರಪ್ಪ ನಾಗರಿಕತೆಯ ಕೆಲವೊಂದು ವಸ್ತುಗಳು ಕೂಡ ಸೇರಿವೆ.












































