
ಉತ್ತರಾಖಾಂಡ್: ರಸ್ತೆ ಸಂಚಾರಕ್ಕೆ ಪುನರಾರಂಭಗೊಂಡ ಕೆಲವೇ ಗಂಟೆಗಳಲ್ಲಿ ರಸ್ತೆಯ ಒಂದು ಭಾಗವು ಕುಸಿದ ಕಾರಣ ರಿಷಿಕೇಶ-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯನ್ನು ಶುಕ್ರವಾರ ಮತ್ತೆ ಮುಚ್ಚಲಾಗಿದ್ದು ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಭದ್ರತಾ ಗೋಡೆ ಕುಸಿದು ಸುಮಾರು 10,000 ಜನರು ಸಿಲುಕಿಕೊಂಡಿದ್ದಾರೆ. ರಸ್ತೆ ಮತ್ತೆ ತೆರೆದುಕೊಳ್ಳಲು 3 ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ರಸ್ತೆಗಳಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ ಮತ್ತು ಜನರು ಹೆದ್ದಾರಿಯುದ್ದಕ್ಕೂ ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಜಿಲ್ಲಾಡಳಿತ ಚಿಕ್ಕ ವಾಹನಗಳಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದೆ. ಆದರೆ ದೂರದಿಂದ ದೊಡ್ಡ ವಾಹನಗಳಲ್ಲಿ ಬಂದ ಜನರು ಹೊರಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಬುಧವಾರದಂದು ಸುರಿದ ಭಾರೀ ಮಳೆಗೆ ಸಾಯನಚಟ್ಟಿ ಮತ್ತು ರಣಚಟ್ಟಿ ನಡುವಿನ ರಸ್ತೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಸುಮಾರು 24 ಗಂಟೆಗಳ ಕಾಲ ಮುಚ್ಚಲಾಗಿದ್ದ ಹೆದ್ದಾರಿಯನ್ನು ಗುರುವಾರ ಸಂಜೆ ಸಂಚಾರಕ್ಕೆ ಪುನಃ ತೆರೆಯಲಾಗಿತ್ತು. ಶುಕ್ರವಾರ ಬೆಳಿಗ್ಗೆ ಹೆದ್ದಾರಿಯ ಭದ್ರತಾ ಗೋಡೆ ಕುಸಿದ ಪರಿಣಾಮ ರಸ್ತೆ ಮತ್ತೆ ಮುಚ್ಚಲ್ಪಟ್ಟಿತು.












































