National

ಆಂಧ್ರಪ್ರದೇಶದ ನೂತನ ರಾಜಧಾನಿಯಾಗಿ ವಿಶಾಖಪಟ್ಟಣ: ಮುಖ್ಯಮಂತ್ರಿ ಜಗನ್ ಘೋಷಣೆ

ಅಮರಾವತಿ: ಆರಂಭದಿಂದಲೂ ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯನ್ನಾಗಿ ಮಾಡಲು ವಿರೋಧಿಸುತ್ತ ಬಂದಿದ್ದ ಸಿಎಂ ಜಗನ್‌ಮೋಹನ್‌ ರೆಡ್ಡಿ ಇದೀಗ ಆಂಧ್ರಪ್ರದೇಶದ ನೂತನ ರಾಜಧಾನಿಯಾಗಿ ವಿಶಾಖಪಟ್ಟಣ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.

ಮಂಗಳವಾರ ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವೈಝಾಗ್ (ವಿಶಾಖಪಟ್ಟಣ) ನಮ್ಮ ರಾಜ್ಯದ ನೂತನ ರಾಜಧಾನಿಯಾಗಲಿದೆ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಈ ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಯೋಜನೆಯ ಅಮರಾವತಿ ಸಂಭಾವ್ಯ ರಾಜಧಾನಿ ಸ್ಥಾನವನ್ನು ಕಳೆದುಕೊಂಡಿದೆ.

ಮುಂದಿನ ಮಾರ್ಚ್ 3 ಮತ್ತು 4 ರಂದು ಬಂದರು ನಗರ ವಿಶಾಖಪಟ್ಟಣದಲ್ಲಿ ಶೃಂಗಸಭೆ ನಡೆಯಲಿದ್ದು, ಈ ಶೃಂಗಸಭೆಯಲ್ಲಿ ಭಾಗಿಯಾಗುವಂತೆ ಸಿಎಂ ಜಗನ್ ಹೂಡಿಕೆದಾರರು, ಕೈಗಾರಿಕೋದ್ಯಮಿಗಳನ್ನು ಈ ಸಂದರ್ಭ ಆಹ್ವಾನಿಸಿದರು. ಕಳೆದ ಮೂರು ವರ್ಷಗಳಿಂದ ಆಂಧ್ರಪ್ರದೇಶವು ಕೈಗಾರಿಕೋದ್ಯಮದ ವ್ಯವಹಾರವನ್ನು ಸುಲಭಗೊಳಿಸುವಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದು ಕೈಗಾರಿಕಾ ಸ್ನೇಹಿ ರಾಜ್ಯವಾಗಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

2014 ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣ ರಾಜ್ಯ ರಚನೆಯಾದಾಗ ಹೊಸ ರಾಜ್ಯ ತೆಲಂಗಾಣಕ್ಕೆ ಹೈದರಾಬಾದ್ ರಾಜಧಾನಿಯಾಯಿತು. 2015 ರಲ್ಲಿ ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಸರ್ಕಾರ ಕೃಷ್ಣಾ ನದಿಯ ದಡದಲ್ಲಿರುವ ಅಮರಾವತಿಯನ್ನು ಹೊಸ ರಾಜಧಾನಿಯಾಗಿ ರೂಪಿಸುವುದಾಗಿ ಘೋಷಿಸಿತ್ತು. ಈಗ ವಿಶಾಖಪಟ್ಟಣವನ್ನು ನೂತನ ರಾಜಧಾನಿಯಾಗಿ ಕಾರ್ಯ ನಿರ್ವಹಿಸಲಿದ್ದು, ಮುಖ್ಯಮಂತ್ರಿ ಕಛೇರಿ ಸೇರಿದಂತೆ ಹಲವು ಕಛೇರಿಗಳು ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ.

Exit mobile version