
ನವದೆಹಲಿ: ಕೋವಿಡ್ ಕಾರಣಗಳಿಂದಾಗಿ ಎರಡು ವರ್ಷಗಳ ನಂತರ ಭಾರತವು ಗಣರಾಜ್ಯೋತ್ಸವಕ್ಕೆ ಹೊರ ದೇಶದ ಅತಿಥಿಯನ್ನು ಕರೆಸುತ್ತಿದೆ. ಈ ಬಾರಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.
ಗಣರಾಜ್ಯೋತ್ಸವಕ್ಕೆ ಅರಬ್ ರಾಷ್ಟ್ರದ ನಾಯಕರನ್ನು ಭಾರತ ಆಹ್ವಾನಿಸಿದ್ದು ಇದೇ ಮೊದಲು. ಈಜಿಪ್ಟ್ ಅಧ್ಯಕ್ಷರು ಮಂಗಳವಾರ ಮೂರು ದಿನಗಳ ಭೇಟಿಗಾಗಿ ನವದೆಹಲಿಗೆ ಆಗಮಿಸಿದ್ದಾರೆ.
ಅಬ್ದೆಲ್ ಫತ್ತಾಹ್ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ ಮತ್ತು ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಈಜಿಫ್ಟ್ ಅಧ್ಯಕ್ಷರು “ಈ ವೈಭವದ ಸ್ವಾಗತಕ್ಕಾಗಿ ನಾನು ಪ್ರಧಾನಿ ಮೋದಿಯವರಿಗೆ ಕೃತಜ್ಞನಾಗಿದ್ದೇನೆ. ನಮ್ಮ ಚರ್ಚೆಗಳ ಸಮಯದಲ್ಲಿ, ನಾವು ವ್ಯಾಪಾರ ಮತ್ತು ಹೂಡಿಕೆ ಮತ್ತು ಆಮದು ಮತ್ತು ರಫ್ತಿನಲ್ಲಿ ನಮ್ಮ ಸಹಕಾರವನ್ನು ಹೇಗೆ ವಿಸ್ತರಿಸುವುದು ಎಂಬುದರ ಕುರಿತು ಮಾತನಾಡಿದ್ದೇವೆ” ಎಂದು ತಿಳಿಸಿದರು.
ಈಜಿಪ್ಟ್‌ನೊಂದಿಗೆ ಬಾಂಧವ್ಯವನ್ನು ಹೆಚ್ಚಿಸಲು ಭಾರತವು ಅಬ್ದೆಲ್ ಫತ್ತಾಹ್ ಆಹ್ವಾನಿಸಿದೆ. ಅಬ್ದೆಲ್ ಫತ್ತಾಹ್ ಜೂನ್ 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಮೊದಲ ಬಾರಿ ಅಕ್ಟೋಬರ್ 2015 ರಲ್ಲಿ ನವದೆಹಲಿಯಲ್ಲಿ ಮೂರನೇ ಭಾರತ-ಆಫ್ರಿಕಾ ಫೋರಮ್ ಶೃಂಗಸಭೆ ಮತ್ತು ಎರಡನೇ ಬಾರಿ 2016 ರಲ್ಲಿ ದ್ವಿಪಕ್ಷೀಯ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದರು.
ಅರಬ್ ದೇಶದೊಂದಿಗೆ ಸಂಬಂಧವನ್ನು ಬಲಪಡಿಸುವುದು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ದೇಶಗಳನ್ನು ಒಳಗೊಂಡಿರುವ ಜಾಗತಿಕ ದಕ್ಷಿಣದ ಕಡೆಗೆ ಭಾರತ ಕೊಡುತ್ತಿರುವ ಪ್ರಾಮುಖ್ಯತೆಯ ಭಾಗವಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ನಂತರ ಗಮನಕ್ಕೆ ಬಂದಿರುವ ಅಲಿಪ್ತ ನೀತಿಯ ತತ್ವಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಇದಾಗಿದೆ.
ಈಜಿಫ್ಟ್ ಗೆ ಈ ಹಿಂದೆ ಭಾರತದ ರಾಯಭಾರಿಯಾಗಿದ್ದ ಸೂರಿ ಅವರ ಪ್ರಕಾರ, ಈಜಿಫ್ಟ್ ಅಧ್ಯಕ್ಶರ ಭೇಟಿ ನಿರ್ಣಾಯಕ ಕ್ಷಣವಾಗಿದೆ. ಇದು ಕಳೆದ ವರ್ಷ ಸ್ವಲ್ಪಮಟ್ಟಿಗೆ ಏರಲು ಪ್ರಾರಂಭಿಸಿದ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಿಗೆ ಮಾತ್ರವಲ್ಲದೆ ರಕ್ಷಣೆ ಮತ್ತು ಭದ್ರತೆಯ ವಿಷಯಗಳ ಮೇಲೂ ಉತ್ತೇಜನವನ್ನು ನೀಡುತ್ತದೆ.