
ಕೊಲ್ಕತ್ತಾ: ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ ಧುಮುಕಿದ್ದು ತಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ ನಿಮ್ಮ ಪ್ರತಿಯೊಂದು ಮತವೂ ನನಗೇ ಬೀಳಬೇಕು. ಇಲ್ಲವೆಂದಾದರೆ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ ಎಂದಿದ್ದಾರೆ.
‘ನಿಮ್ಮ ಪ್ರತಿಯೊಂದು ಮತವೂ ನಂಗೇ ಮುಖ್ಯವಾಗಿದೆ. ನಾನು ಸುಲಭವಾಗಿ ಗೆಲ್ಲುತ್ತೇನೆ ಎಂದು ಭಾವಿಸಿ ಉದಾಸೀನ ತೋರಿ ಮತ ಚಲಾಯಿಸದೆ ಇರಬೇಡಿ. ಭಾರೀ ಮಳೆ, ಬಿರುಗಾಳಿ ಬಂದರೂ ಮತಕೇಂದ್ರಕ್ಕೆ ಬಂದು ಮತ ಚಲಾಯಿಸಿ’ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಇತ್ತ ಮಮತಾ ಒಂದೊಂದು ಮತ ಕೇಳುವುದಕ್ಕೆ ವ್ಯಂಗ್ಯವಾಡಿರುವ ಬಂಗಾಲ ಬಿಜೆಪಿ ಐಟಿ ಸೆಲ್’ನ ಅಮಿತ್ ಮಾಳವೀಯ ಅವರು, ‘ ಮಮತಾ ಅವರು ಭವಾನಿಪುರದಲ್ಲೂ ಸೋಲುವ ಭೀತಿ ಹೊಂದಿದ್ದಾರೆ. ಗೆಲುವಿನ ವಿಶ್ವಾಸ ಇನ್ನೂ ಅವರಿಗೆ ಸಿಕ್ಕಿಲ್ಲ. ಹಾಗಾಗಿ ಮಮತಾ ಅವರು ಒಂದೊಂದು ಮತಕ್ಕೂ ಬೇಡಿಕೆ ಇಡುತ್ತಿದ್ದಾರೆ’ ಎಂದಿದ್ದಾರೆ.
ಮಮತಾ ಅವರು ಇತ್ತೀಚಿಗಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅದ್ಭುತ ಗೆಲುವಿನೊಂದಿಗೆ ಅಧಿಕಾರಕ್ಕೆ ತಂದರೂ ತಾನು ಮಾತ್ರ ನಂದಿಗ್ರಾಮದಲ್ಲಿ ಅತ್ಯಲ್ಪ ಮತಗಳಿಂದ ಸೋಲು ಕಂಡಿದ್ದರು. ಮುಖ್ಯಮಂತ್ರಿಯಾದವರು 6 ತಿಂಗಳೊಳಗೆ ವಿಧಾನಸಭೆಯ ಸದಸ್ಯರಾಗಬೇಕಾದ ಅನಿವಾರ್ಯದ ಕಾರಣ ಇದೀಗ ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಸ್ಪರ್ಧಿಸುತ್ತಿದ್ದಾರೆ.












































