
ಶಿವಮೊಗ್ಗ: ಅಮಿತ್ ಶಾ ನಿನ್ನೆಯ ದಿನ ಕರ್ನಾಟಕಕ್ಕೆ ಬಂದು ಮುಂದಿನ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎಂದು ಸೂಚನೆ ಕೊಟ್ಟ ಮೇಲೆ ಬಿಜೆಪಿಯ ಇತರ ನಾಯಕರಲ್ಲಿ ತಳಮಳ ಹೆಚ್ಚಿದೆ. ಸಚಿವ ಈಶ್ವರಪ್ಪ ಅವರು ನಮಗೆ ಸಾಮೂಹಿಕ ನಾಯಕತ್ವದಲ್ಲೇ ನಂಬಿಕೆಯಿದೆ. ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ ಎಂದಿದ್ದಾರೆ.
ಅಮಿತ್ ಷಾ ಅವರು ಯಾವ ರೀತಿ ಹೇಳಿದ್ದರೋ ನನಗೆ ಗೊತ್ತಿಲ್ಲ. ನಾವೆಲ್ಲ ಸಾಮೂಹಿಕ ನಾಯಕತ್ವದಲ್ಲೇ ಮುಂದಿನ ಚುನಾವಣೆಗೆ ಹೋಗುತ್ತೇವೆ. ಅದರಲ್ಲಿ ಬೊಮ್ಮಾಯಿ ಅವರ ನಾಯಕತ್ವವೂ ಇರಲಿದೆ. ಹಾಗೆಯೇ ರಾಜ್ಯಾಧ್ಯಕ್ಷರೂ ಉತ್ತಮವಾಗಿ ಪಕ್ಷ ಸಂಘಟಿಸುತ್ತಿದ್ದಾರೆ, ಹಾಗಾಗಿ ಅವರ ನಾಯಕತ್ವವೂ ಇರಲಿದೆ. ಜತೆಗೆ ನಾವೂ ಜತೆಯಾಗುತ್ತೇವೆ ಎಂದು ಈಶ್ವರಪ್ಪ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಅಮಿತ್ ಶಾ ಯಡಿಯೂರಪ್ಪರ ನಂತರ ಬಸವರಾಜ ಬೊಮ್ಮಾಯಿಯವರನ್ನು ಕರ್ನಾಟಕ ಬಿಜೆಪಿಯ ಹೊಸ ಮುಖವನ್ನಾಗಿ ಬಿಂಬಿಸಿದ್ದಕ್ಕೆ ಪಕ್ಷದೊಳಗೇ ಅಪಸ್ವರಗಳು ಇದ್ದಂತಿದೆ. ಈ ಮೊದಲು ಮುಖ್ಯಮಂತ್ರಿಯಾಗಲು ಪ್ರಯತ್ನಿಸಿ ಸೋತವರೂ ಸೇರಿದಂತೆ ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಕನಸು ಹೊತ್ತು ರಾಜಕಾರಣ ಮಾಡುತ್ತಿರುವ ಹಲವು ಬಿಜೆಪಿ ನಾಯಕರು ಬೊಮ್ಮಾಯಿಯನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಗೆ ಹೋಗುವುದನ್ನು ಸಹಿಸುವುದಿಲ್ಲ. ಈಶ್ವರಪ್ಪ ಅವರ ಮಾತಿನಲ್ಲಿ ಈ ಅಪಸ್ವರ ವ್ಯಕ್ತವಾಗುತ್ತದೆ.
ಬೊಮ್ಮಾಯಿಯವರು ಯಡಿಯೂರಪ್ಪ ಅವರ ಆಯ್ಕೆ ಎಂಬ ಸಿಟ್ಟು ಕೆಲವರಲ್ಲಿ ಇದ್ದಂತೆ ತೋರುತ್ತಿದ್ದು, ನೇರವಾಗಿ ವ್ಯಕ್ತಪಡಿಸಲು ಹಲವರಿಗೆ ಧೈರ್ಯ ಸಾಲುತ್ತಿಲ್ಲ ಎನ್ನಲಾಗಿದೆ. ಹೈ ಕಮಾಂಡೇ ಬೊಮ್ಮಾಯಿ ಬೆನ್ನಿಗೆ ನಿಂತಿರುವಾಗ ಅಪಸ್ವರ ಎತ್ತಿ ಏನು ಪ್ರಯೋಜನ ಎಂದು ಸುಮ್ಮನಾದಂತಿದೆ. ಅದರ ಜತೆ ಕಳೆದ ಬಾರಿ ಯಡಿಯೂರಪ್ಪರನ್ನು ಇಳಿಸಲು ಬೆನ್ನ ಹಿಂದೆ ಯತ್ನಿಸಿದ ಎಲ್ಲರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಹೈ ಕಮಾಂಡ್ ಬಗ್ಗೆ ಕೊಂಚ ಭಯವನ್ನು ಹುಟ್ಟಿಸಿದೆ. ನಾವೇನಾದರೂ ಮತ್ತೆ ಹಿಂಬಾಗಿಲ ರಾಜಕಾರಣ ಮಾಡಲು ಹೋಗಿ ಇರುವ ಸ್ಥಾನಗಳನ್ನೂ ಕಳೆದುಕೊಳ್ಳುವುದು ಬೇಡ ಎಂಬ ಸೇಫ್ ಗೇಮ್ ರಾಜಕಾರಣಕ್ಕೆ ಜೋತು ಬಿದ್ದಿರುವಂತೆ ಕಾಣುತ್ತಿದೆ.