
ಬೆಂಗಳೂರು: ವಿಧಾನ ಪರಿಷತ್ತಿನ ಚುನಾವಣೆಗೆ ಬಹುತೇಕ ವಿಜಯೇಂದ್ರ ಅವರಿಗೆ ಟಿಕೆಟ್ ಸಿಕ್ಕಿಬಿಡುತ್ತೆ ಅನ್ನುವ ನಿರೀಕ್ಷೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿ ಹುಸಿಯಾದ ಬಳಿಕ ಯಡಿಯೂರಪ್ಪ ಅವರು ಮೌನಕ್ಕೆ ಶರಣಾಗಿದ್ದಾರೆ. ಗುರುವಾರ ಬೆಳಗಾವಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲೂ ಬಿಎಸ್ವೈ ಪಾಲ್ಗೊಳ್ಳದೇ ಇದ್ದು ಸುಮಾರು 10 ದಿನಗಳ ಕಾಲ ವಿಶ್ರಾಂತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಬೆಳವಣಿಗೆ ಸದ್ಯದಲ್ಲೇ ನಡೆಯುವ ಶಿಕ್ಷಕರ ಹಾಗು ಪದವೀಧರರ ಕ್ರೇತ್ರಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹೊಡೆತ ನೀಡಲಿದೆ ಎಂದು ಅಂದಾಜಿಸಲಾಗಿದೆ. ಪಕ್ಷದ ಪ್ರಚಾರದಿಂದ ರಾಜಾಹುಲಿ ದೂರ ಉಳಿದರೆ ಅಭ್ಯರ್ಥಿಗಳಿಗೆ ಹಿನ್ನಡೆಯಾಗಲಿದೆ. ಮತ್ತೊಂದು ಕಡೆ ಬೆಳಗಾವಿಯಲ್ಲಿ ಬಿಜೆಪಿಯ ಆಂತರಿಕ ಜಗಳ ತಾರಕಕ್ಕೆ ಏರಿದ್ದು ಇದು ಕೂಡ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.
ಕಳೆದ ಬಾರಿ ಸೋತರೂ ಕೇಂದ್ರ ನಾಯಕರು ಲಕ್ಷ್ಮಣ ಸವದಿಯನ್ನು ಉಪಮುಖ್ಯಮಂತ್ರಿಯಾಗಿ ಕಳುಹಿಸಿದ್ದು, ಈ ಬಾರಿ ಮತ್ತೆ ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಿದ್ದು ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಅಲೆ ಏಳುವಂತಾಗಿದೆ. ಲಿಂಗಾಯಿತ ನಾಯಕರಾಗಿ ಲಕ್ಷ್ಮಣ ಸವದಿಯನ್ನು ಬೆಳೆಸುವ ಪ್ರಯತ್ನವೋ ಅಥವಾ ಲಿಂಗಾಯಿತರಲ್ಲಿ ಪ್ರಭಾವಿ ವರ್ಚಸ್ವೀ ಯುವ ನಾಯಕರಾಗಿರುವ ವಿಜಯೇಂದ್ರರನ್ನು ಕಟ್ಟಿ ಹಾಕುವ ಹುನ್ನಾರವೋ ಕೇಂದ್ರ ಬಿಜೆಪಿ ನಾಯಕರೇ ಉತ್ತರಿಸಬೇಕು. ಆದರೂ ಚುನಾವಣಾ ಯಶಸ್ವೀ ತಂತ್ರಗಾರ ವಿಜಯೇಂದ್ರರನ್ನು ಕೈಬಿಟ್ಟು ಉಪಯೋಗವಿಲ್ಲದ ಸವದಿಗೆ ಟಿಕೆಟ್ ನೀಡಿದ್ದು ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲು ಎಂಬುದಂತೂ ಸತ್ಯ. ಒಟ್ಟಿನಲ್ಲಿ ಈ ಬೆಳವಣಿಗೆ, ಯಡಿಯೂರಪ್ಪರ ಮೌನ ಪಕ್ಷವನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೋ ಕಾದು ನೋಡಬೇಕು.
ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd