Coastal

ಮಂಗಳೂರು ವಿವಿ ಕಾಲೇಜು: ಹಿಜಾಬ್ ಧರಿಸಲು ಅವಕಾಶವಿಲ್ಲ, ಕೋರ್ಟ್ ಆದೇಶ ಪಾಲಿಸಿ; ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ

ಮಂಗಳೂರು: ವಿದ್ಯಾರ್ಥಿಗಳು ಕಡ್ಡಾಯವಾಗಿ ಹಿಜಾಬ್ ಕುರಿತ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ಸೋಮವಾರದಿಂದ ಯಾವುದೇ ಕಾರಣಕ್ಕೂ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ ನೀಡಿದ್ದಾರೆ. ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಹಿನ್ನೆಲೆ ಕಾಲೇಜು ಅಭಿವೃದ್ಧಿ ಸಮಿತಿ ಸಭೆ (ಸಿಡಿಸಿ) ನಡೆಸಿದ ಶಾಸಕರು ಈ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿಡಿಸಿ ಅಧ್ಯಕ್ಷರೂ ಆಗಿರುವ ಮಂಗಳೂರು ದಕ್ಷಿಣ ಶಾಸಕ ವೇದಾವ್ಯಾಸ ಕಾಮತ, “ನಮಗೆ ಬಂದ ಆದೇಶದ ಪ್ರಕಾರ ಪದವಿ ಕಾಲೇಜಿಗೂ ಕೋರ್ಟ್ ಆದೇಶ ಅನ್ವಯವಾಗುತ್ತದೆ. ವಿದ್ಯಾರ್ಥಿನಿಯರು ಪ್ರತ್ಯೇಕವಾದ ವಿಶ್ರಾಂತಿ ಕೊಠಡಿಯಲ್ಲಿ ಹಿಜಾಬ್ ತೆಗೆದಿಟ್ಟು ತರಗತಿಗೆ ಹೋಗಲಿ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಮಾಡುವ ಕೆಲಸವನ್ನು ವಿವಿ ಕುಲಪತಿಯವರು ಮಾಡುತ್ತಾರೆ. ಅದಕ್ಕೆ ಒಪ್ಪದೇ ಬೇರೆ ಕಾಲೇಜಿಗೆ ಹೋಗುವುದಾದರೆ ಅದಕ್ಕೂ ವ್ಯವಸ್ಥೆ ಮಾಡುತ್ತೇವೆ” ಎಂದು ಹೇಳಿದರು.

ವಿದ್ಯಾರ್ಥಿಗಳು ತರಗತಿಯೊಳಗೆ ಹಿಜಾಬ್ ಧಾರಣೆ ವಿರೋಧಿಸಿ ಪ್ರತಿಭಟನೆ ಮಡಿದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, “ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವುದು ತಪ್ಪಲ್ಲ. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಹಕ್ಕಾಗಿದ್ದು ಕೆಲ ವಿದ್ಯಾರ್ಥಿನಿಯರು ನ್ಯಾಯಾಲಯದ ಆದೇಶ ಪಾಲಿಸದ ಕಾರಣ ಅವರು ಇಲ್ಲಿ ಪ್ರತಿಭಟನೆ ಮಾಡಿದ್ದಾರೆ” ಎಂದರು.

“ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಲೇಜಿಗೆ ಹಿಜಾಬ್ ಧರಿಸಿ ಪ್ರವೇಶ ಇಲ್ಲ. ಕಾಲೇಜು ಕ್ಯಾಂಪಸ್ ಗೆ ಹಿಜಾಬ್ ಹಾಕಿಕೊಂಡು ಬರಬಹುದು. ಆದರೆ ತರಗತಿ, ಲೈಬ್ರೆರಿಯಲ್ಲಿ ಹಿಜಾಬ್ ಹಾಕಲು ಅವಕಾಶ ಇಲ್ಲ. ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದು ತರಗತಿಗೆ ಪ್ರವೇಶಿಸಬೇಕು. ಕೋರ್ಟ್ ಆದೇಶ ಬಳಿಕ ಪರೀಕ್ಷೆಗಳು ಇದ್ದ ಹಿನ್ನೆಲೆಯಲ್ಲಿ ಮಾರ್ಗಸೂಚಿ ಹೊರಡಿಸುವುದು ತಡವಾಗಿದೆ” ಎಂದು ವಿವಿ ಕುಲಪತಿ ಡಾ. ಸುಬ್ರಹ್ಮಣ್ಯ ಯಡಪಡಿತ್ತಾಯ ಸಭೆಯಲ್ಲಿ ಹೇಳಿದರು.

ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd

Exit mobile version