Political

ರಾಜ್ಯಸಭೆ ಚುನಾವಣೆ: ಕರ್ನಾಟಕದಿಂದ ಪ್ರಿಯಾಂಕ ಗಾಂಧಿ ಸ್ಪರ್ಧೆ?

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಎಐಸಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸ್ಪರ್ಧಿಸಬೇಕೆಂದು ಕೇಳಿಕೊಳ್ಳಲು ರಾಜ್ಯ ಕಾಂಗ್ರೆಸ್ ತಯಾರಾಗಿದೆ. ಜೂನ್ 10 ರಂದು ಚುನಾವಣೆ ನಡೆಯಲಿದ್ದು ಪ್ರಿಯಾಂಕಾ ಅವರನ್ನು ರಾಜ್ಯಕ್ಕೆ ಕರೆ ತಂದು ಇಲ್ಲಿನ ಸಂಸದರಾಗಿಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ತಂತ್ರ ಹೆಣೆಯಲು ಕೆಪಿಸಿಸಿ ಸಜ್ಜಾಗಿದೆ.

ಮುಂದಿನ ವರ್ಷ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯದಿಂದ
ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಯೋಚಿಸಿದ್ದಾರೆ ಎನ್ನಲಾಗಿದೆ.

ರಾಜ್ಯದ ಮೂಲಕ ಕಾಂಗ್ರೆಸ್ ಪಕ್ಷದ ಹಾಲಿ ರಾಜ್ಯಸಭಾ ಸದಸ್ಯ ಆಗಿರುವ ಜೈರಾಮ್ ರಮೇಶ್ ಮತ್ತೊಮ್ಮೆ ಪುನರ್ ನಾಮನಿರ್ದೇಶನವಾಗುವ ಸಾಧ್ಯತೆಯಿದೆ. ಜೈರಾಮ್ ರಮೇಶ್ ಬೇರೆೊಂದು ರಾಜ್ಯದಿಂದ ಸ್ಪರ್ಧಿಸಿದರೆ ಬೇರೆ ಅಭ್ಯರ್ಥಿಯನ್ನು ಪಕ್ಷ ಹಾಕಲಿದೆ. ಆದರೆ ಪ್ರಿಯಾಂಕಾ ಅವರು ಒಪ್ಪಿಕೊಳ್ಳುವುದು ಅನುಮಾನ. ಅವರು ಸಂಸತ್ತಿಗೆ ಪ್ರವೇಶಿಸಲು ರಾಜ್ಯ ಸಭೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನಿಸುತ್ತಿಲ್ಲ ಎಂದು ಕಾಂಗ್ರೆಸ್ಸಿನ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ರಾಜ್ಯಸಭಾ ಸ್ಥಾನಕ್ಕಾಗಿ ಈಗಾಗಲೇ ಮಾಜಿ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಲಾಬಿ ಮಾಡುತ್ತಿದ್ದಾರೆ. ದಿವಂಗತ ಆಸ್ಕರ್ ಫರ್ನಾಂಡೀಸ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ತಮ್ಮ ಸಮುದಾಯದ ಮುಖಂಡರನ್ನು ಸದಸ್ಯರನ್ನಾಗಿ ಮಾಡುವಂತೆ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಕೇಳಿಕೊಂಡಿದ್ದಾರೆ.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಬಿಜೆಪಿಯ ಕೆ ಸಿ ರಾಮಮೂರ್ತಿ, ಜೈರಾಮ್ ರಮೇಶ್ ಮತ್ತು ದಿವಂಗತ ಆಸ್ಕರ್ ಫೆರ್ನಾಡೀಸ್ ಅವರ ಅವಧಿ ಜೂನ್ 30 ರಂದು ಕೊನೆಗೊಳ್ಳಲಿದೆ.

Exit mobile version