
ವಾರಾಣಸಿ: ಸ್ಥಳೀಯ ನ್ಯಾಯಾಲಯ ನೇಮಿಸಿದ ವಿಡಿಯೋ ಸರ್ವೇಕ್ಷಣಾ ಸಮಿತಿಯು ಸತತ ಎರಡನೇ ದಿನವೂ ಸಮೀಕ್ಷೆ ಆರಂಭಿಸಿರುವ ಹಿನ್ನೆಲೆಯಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಕೀಲರು ಹಾಗೂ ಅರ್ಜಿದಾರ ಹಿಂದೂಗಳ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಜೈನ್ ಅವರ ಪ್ರಕಾರ, ದೇವಾಲಯದ ಭಾಗವಾಗಿದ್ದ ಮಸೀದಿಯ ಪ್ರದೇಶಗಳಲ್ಲಿ ಇಂದು ಸಮೀಕ್ಷೆ ನಡೆಸಲಾಗುವುದು. ಜ್ಞಾನವಾಪಿ ಕಾಂಪ್ಲೆಕ್ಸ್‌ನ ಪಶ್ಚಿಮ ಭಾಗದಲ್ಲಿ ಇಂದಿಗೂ ಹಿಂದೂ ದೇವಾಲಯದ ಅವಶೇಷಗಳು ಗೋಚರಿಸುತ್ತಿವೆ ಮತ್ತು ಹಿಂದೂ ದೇವತೆಗಳ ಚಿತ್ರಗಳು ಅವಕ್ಕೆ ದೊಡ್ಡ ಪುರಾವೆಯಾಗಿದೆ. ಇದಕ್ಕಾಗಿ ಇಂದು ನಾಲ್ಕನೇ ಕೊಠಡಿಯ ಬೀಗ ತೆರೆಯಲಾಗಿದ್ದು, ನಿನ್ನೆ ಸಮೀಕ್ಷೆ ವೇಳೆ ಮೊದಲ ಮೂರು ಕೊಠಡಿಗಳನ್ನು ತೆರೆಯಲಾಗಿತ್ತು. ಸರ್ವೆ ಶಾಂತಿಯುತವಾಗಿ ನಡೆಯುತ್ತಿದೆ ಎಂದು ನ್ಯಾಯಾಲಯದ ಆಯುಕ್ತ ವಿಶಾಲ್ ಸಿಂಗ್ ಹೇಳಿದ್ದಾರೆ.
ಸಮೀಕ್ಷೆ ಇಂದಿಗೆ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಹಿಂದೂ ಪರ ವಕೀಲರ ಪ್ರಕಾರ ಇದುವರೆಗೆ ಜನರಿಗೆ ತಿಳಿದಿಲ್ಲದ ಹಲವು ವಿಷಯಗಳು ನಿನ್ನೆ (ಶನಿವಾರ) ನಡೆದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.