Sports

ಸೋಲಿನ ಕುಣಿಕೆಗೆ ಬಿದ್ದಿದ್ದ ಭಾರತಕ್ಕೆ ಅಶ್ವಿನ್, ಶ್ರೇಯಸ್ ಆಸರೆ: ಬಾಂಗ್ಲಾ ಎದುರು ಎರಡನೇ ಟೆಸ್ಟ್ ಜಯ

ಡಾಕ: ಹಲವು ರೋಚಕ ತಿರುವು ಕಂಡ ಬಾಂಗ್ಲಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೂರು ವಿಕೆಟುಗಳಿಂದ ಜಯಗಳಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. 74 ರನ್ನುಗಳಿಗೆ ತನ್ನ 7 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದ ಭಾರತ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ಅಮೋಘ ಬ್ಯಾಟಿಂಗ್ ಹಾಗು ಶ್ರೇಯಸ್ ಅಯ್ಯರ್ ಅವರ ಉತ್ತಮ ಸಾಥ್ ನಿಂದಾಗಿ ರೋಚಕ ಜಯ ಸಾಧಿಸಿತು.

145 ರನ್ನುಗಳ ಸುಲಭ ಗುರಿ ಪಡೆದಿದ್ದ ಭಾರತ ಶನಿವಾರ ನಡೆದ ನಾಟಕೀಯ ತಿರುವಿನಲ್ಲಿ ಅಗ್ರ ಕ್ರಮಾಂಕದ 4 ಆಟಗಾರರನ್ನು ಕೇವಲ 37 ರನ್ನಿಗೆ ಕಳೆದುಕೊಂಡಿತ್ತು. ಇಂದು ಬೆಳಗ್ಗೆ 4 ವಿಕೆಟ್ ನಷ್ಟಕ್ಕೆ 45 ರನ್ನಿನಿಂದ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಉತ್ತಮ ಜತೆಯಾಟ ಸಿಗಲೇ ಇಲ್ಲ. ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಭಾರತ 74ಕ್ಕೆ 7 ಎಂಬ ಸೋಲಿನ ಸ್ಥಿತಿಗೆ ಬಂದು ನಿಂತಿತ್ತು. ಆಗಷ್ಟೇ ಕ್ರೀಸಿಗೆ ಬಂದಿದ್ದ ಆರ್ ಅಶ್ವಿನ್ ಹಾಗು ಶ್ರೇಯಸ್ ಅಯ್ಯರ್ ಅವರ ಜೋಡಿಯ 105 ಬಾಲುಗಳಲ್ಲಿನ 71 ರನ್ ಪಾಲುದಾರಿಕೆ ಕುಸಿದ ಭಾರತವನ್ನು ಸೋಲಿನ ಕುಣಿಕೆಯಿಂದ ಮೇಲೆತ್ತಿ ಸತತ ಎರಡನೇ ಟೆಸ್ಟ್ ಜಯಿಸುವಂತೆ ಮಾಡಿತು. ಅಶ್ವಿನ್ ಬಾಂಗ್ಲಾ ಬೌಲರ್ ಮೆಹದಿ ಅವರ ಒಂದೇ ಓವರಿನಲ್ಲಿ (ಇನ್ನಿಂಗ್ಸ್ ನ ಕೊನೆಯ ಓವರ್) 16 ರನ್ (6,2,4,4) ಚಚ್ಚುವ ಮೂಲಕ ಜಯದ ರನ್ ಬಾರಿಸಿದರು. ಅಶ್ವಿನ್ 42 (62), ಶ್ರೇಯಸ್ ಅಯ್ಯರ್ 29 (46) ರನ್ ಗಳಿಸಿ ಅಜೇಯರಾಗುಳಿದರು.

ಬಾಂಗ್ಲಾದೇಶವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಲಿಟ್ಟನ್ ದಾಸ್ ಅವರ ಮಿಂಚಿನ 73 ರನ್ ಸಹಾಯದಿಂದ 231 ರನ್ ಗಳಿಸಿತ್ತು. ಈ ಜಯದೊಂದಿಗೆ ಬಾಂಗ್ಲಾ ಎದುರಿನ ಟೆಸ್ಟ್ ಸರಣಿಯನ್ನು ಕೈ ವಶ ಮಾಡಿಕೊಂಡಿತು. ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ನಲ್ಲಿ ತನ್ನ ಎರಡನೇ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿತು.

ಭಾರತವನ್ನು ಸೋಲಿನ ದವಡೆಯಿಂದ ಮೇಲೆತ್ತಿದ ಹಾಗು 6 ವಿಕೆಟ್ ಕಿತ್ತ ರವಿಚಂದ್ರನ್ ಅಶ್ವಿನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರೆ, ಚೇತೇಶ್ವರ್ ಪೂಜಾರ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿಯಿತು.

Exit mobile version