Sports

ಎಂಎಸ್ ಧೋನಿಗೆ 15 ಕೋಟಿಗೂ ಹೆಚ್ಚು ವಂಚನೆ: ಮಾಜಿ ಬ್ಯುಸಿನೆಸ್ ಪಾಲುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಕ್ರಿಕೆಟ್ ದಿಗ್ಗಜ

ರಾಂಚಿ: ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಶ್ ವಿರುದ್ಧ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ದಿವಾಕರ್ ಅವರು 2017 ರಲ್ಲಿ ಎಂಎಸ್‌ಡಿಯೊಂದಿಗೆ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ದಿವಾಕರ್ ಅವರು ಒಪ್ಪಂದದಲ್ಲಿ ವಿವರಿಸಿರುವ ಷರತ್ತುಗಳನ್ನು ಅನುಸರಿಸಲು ವಿಫಲರಾಗಿದ್ದಾರೆ. ಅರ್ಕಾ ಸ್ಪೋರ್ಟ್ಸ್ ಫ್ರಾಂಚೈಸ್ ಶುಲ್ಕವನ್ನು ಪಾವತಿಸಲು ಮತ್ತು ಒಪ್ಪಂದದ ನಿಯಮಗಳ ಪ್ರಕಾರ ಲಾಭವನ್ನು ಹಂಚಿಕೊಳ್ಳಲು ವಿಫಲವಾಗಿದೆ ಎಂದು ಧೋನಿ ದೂರಿದ್ದಾರೆ.

ಹಲವಾರು ಪ್ರಯತ್ನಗಳ ಹೊರತಾಗಿಯೂ, ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಕಡೆಗಣಿಸಲಾಗಿದೆ. ಪರಿಣಾಮವಾಗಿ, ಎಂಎಸ್‌ ಧೋನಿ ಅವರು ಆಗಸ್ಟ್ 15, 2021 ರಂದು ಆರ್ಕಾ ಸ್ಪೋರ್ಟ್ಸ್‌ಗೆ ನೀಡಲಾದ ಅಧಿಕಾರ ಪತ್ರವನ್ನು ಹಿಂತೆಗೆದುಕೊಂಡಿದ್ದರು. ಬಳಿಕ ಹಲವು ಕಾನೂನು ನೋಟಿಸ್‌ಗಳನ್ನು ಕಳುಹಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.

ವಿಧಿ ಅಸೋಸಿಯೇಟ್ಸ್ ಮೂಲಕ ಎಂಎಸ್‌ ಧೋನಿ ಅವರನ್ನು ಪ್ರತಿನಿಧಿಸುವ ದಯಾನಂದ್ ಸಿಂಗ್, ಆರ್ಕಾ ಸ್ಪೋರ್ಟ್ಸ್‌ನಿಂದ 15 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಹೇಳಿದ್ದಾರೆ.

Exit mobile version