Coastal

ಮಂಗಳೂರು: ನ್ಯಾಯ ಕೇಳಿ ಮದುವೆ ಹಾಲ್ ಗೆ ಬಂದ ಮಾಜಿ ಪ್ರೇಯಸಿ, ಮದುಮಗನಿಗೆ ಶಾಕ್

ಮಂಗಳೂರು: ಮಂಗಳೂರಿನ ಕೋಟೆಕಾರಿನ ಬೀರಿ ಬಳಿಯ ಪರಿವಾರ್ ರೆಸಿಡೆನ್ಸಿ ಸಭಾಂಗಣದಲ್ಲಿ ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಹುಡುಗಿ ಜತೆ ಇಂದು ನಡೆಯುತ್ತಿತ್ತು. ಮದುವೆ ನಡೆಯುತ್ತಿದ್ದ ವೇಳೆ ಪೊಲೀಸರ ಜತೆಗೆ ಆಗಮಿಸಿದ ಮದುಮಗನ ಮಾಜಿ ಪ್ರೇಯಸಿ ಮೈಸೂರಿನ ಯುವತಿಯೊಬ್ಬಳು ವರ ತನಗೆ ಮೋಸ ಮಾಡಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ನನ್ನಿಂದ ಲಕ್ಷಗಟ್ಟಲೆ ಹಣ, ಚಿನ್ನಾಭರಣಗಳನ್ನು ಪಡೆದುಕೊಂಡು ವಂಚಿಸಿದ್ದಾನೆ ಎಂದು ಎಲ್ಲರ ಸಮ್ಮುಖದಲ್ಲೇ ಆರೋಪ ಮಾಡಿದ್ದಾಳೆ.

ಕೇರಳದ ಕೊಝಿಕ್ಕೋಡ್ ಮೂಲದ ನಿವಾಸಿ ಅಕ್ಷಯ್ ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ಶಾದಿ ಡಾಟ್ ಕಾಮ್ ಎಂಬ ಮದುವೆ ಸಂಬಂಧ ಕುದುರಿಸುವ ವೆಬ್ ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದನು. ಬಳಿಕ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಸುತ್ತಾಡಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಆತ ಮದುವೆಗೆ ಒಲ್ಲೆ ಎಂದಿದ್ದು ಮಂಗಳೂರು ಮೂಲದ ಬೇರೊಬ್ಬ ಯುವತಿಯ ಜೊತೆ ಮದುವೆಗೆ ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.

ಮೈಸೂರಿನ ಸಂತ್ರಸ್ತ ಯುವತಿ ಕಳೆದ ಡಿಸೆಂಬರ್ 26 ರಂದು ಕೇರಳದ ಪೊಲೀಸ್ ಠಾಣೆಯಲ್ಲಿ ಅಕ್ಷಯ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಪ್ರಕರಣ ಸಂಬಂಧ ಅರೋಪಿ ಅಕ್ಷಯ್​ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಈ ಮಧ್ಯೆ ಅಕ್ಷಯ್​ಗೆ ಮಂಗಳೂರಿನ ಹುಡುಗಿ ಜತೆ ಮದುವೆ ನಿಶ್ಚಯವಾಗಿದೆ.

ಕೋಟೆಕಾರ್ ಬೀರಿಯ ಖಾಸಗಿ ಸಭಾಂಗಣದಲ್ಲಿ ಅಕ್ಷಯ್ ಮದುವೆ ನಡೆಯುತ್ತಿರುವ ವಿಚಾರ ತಿಳಿದು ಮೈಸೂರಿನ ಯುವತಿ ಉಳ್ಳಾಲ ಪೊಲೀಸರೊಂದಿಗೆ ಹಾಲ್‌ಗೆ ಆಗಮಿಸಿ ಕಲ್ಯಾಣ ಮಂಟಪದ ಮುಂಭಾಗ ಗಲಾಟೆ ನಡೆಸಿದ್ದಾಳೆ. ಬಳಿಕ ಪೊಲೀಸರೇ ಆಕೆಯನ್ನು ಹಾಲ್’ನಿಂದ ಕೇರಳ ಗಡಿ ಭಾಗದ ಮಂಜೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರ ಕ್ರಮವನ್ನು ವಿರೋಧಿಸಿದ ಸಂತ್ರಸ್ತೆ ಯುವತಿ, “ಆತನನ್ನು ಅರೆಸ್ಟ್ ಮಾಡಿ ಅಂದರೆ ನನ್ನನ್ನೇ ಕರೆದುಕೊಂಡು ಹೋಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಗಲಭೆ ಬೆನ್ನಲ್ಲೇ ಅಕ್ಷಯ್ ನಿಗದಿಯಾದಂತೆ ಮಂಗಳೂರು ಯುವತಿಗೆ ತಾಳಿ ಕಟ್ಟಿ ಮದುವೆ ಆಗಿದ್ದಾನೆ.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd

Exit mobile version