
ಬರ್ಮಿಂಗ್ಹ್ಯಾಮ್: 2022ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಲೂಟಿ ಮುಂದುವರೆದಿದ್ದು, ಐದನೇ ದಿನವಾದ ಮಂಗಳವಾರ ಅಪರೂಪದ ಕ್ರೀಡೆ ಲಾನ್ ಬೌಲ್ಸ್ ಕ್ರೀಡೆಯಲ್ಲಿ ಇತಿಹಾಸ ಬರೆದ ಭಾರತದ ಮಹಿಳೆಯರ ತಂಡ ಮೊದಲ ಬಾರಿ ಚಿನ್ನ ಗೆದ್ದು ಬೀಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಲಾನ್ ಬೌಲ್ಸ್ ಪಂದ್ಯದ ಫೈನಲ್ನಲ್ಲಿ ಭಾರತದ ವನಿತಾ ತಂಡ 17-10 ಅಂತರದಿಂದ ಮಣಿಸಿ ಐತಿಹಾಸಿಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಲವ್ಲೀ ಚೌಬೆ, ಪಿಂಕಿ, ನಯನಮೋನಿ ಹಾಗೂ ರೂಪಾ ರಾಣಿ ಟರ್ಕಿ ಅವರನ್ನೊಳಗೊಂಡ 4 ಮಂದಿಯ ಭಾರತೀಯ ಮಹಿಳಾ ತಂಡ ಈ ಮೂಲಕ ಇತಿಹಾಸ ಬರೆಯಿತು.
ಇದು 2022 ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ನಾಲ್ಕನೇ ಚಿನ್ನದ ಪದಕವಾಗಿದೆ. 4 ಚಿನ್ನ, 3 ಬೆಳ್ಳಿ ಹಾಗೂ ೩ ಕಂಚು ಪದಕಗಳನ್ನು ಜಯಿಸಿರುವ ಭಾರತ ಒಟ್ಟು 10 ಪದಕಗಳ ಮೂಲಕ ಆರನೇ ಸ್ಥಾನದಲ್ಲಿದೆ.












































