Sports

ವಿಶ್ವಕಪ್ ಟಿ20: ಆಸೀಸ್ ಬಗ್ಗುಬಡಿದ ಆಂಗ್ಲರು

ದುಬೈ: ಇಲ್ಲಿ ನಡೆದ ವಿಶ್ವಕಪ್ ಟಿ೨೦ ಕೂಟದ 26ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮೇಲೆ ಇಂಗ್ಲೆಂಡ್ ಸವಾರಿ ಮಾಡಿದೆ. ಆಸೀಸ್ ನೀಡಿದ 125 ರನ್ನುಗಳ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 12ನೇ ಓವರಿನಲ್ಲಿ ಗೆಲುವಿನ ಗುರಿ ತಲುಪಿ ಅತ್ತ್ಯುತ್ತಮ ಸ್ಟ್ರೈಕ್ ರೇಟ್ ನೊಂದಿಗೆ ವಿಜಯಿಯಾಯಿತು.

ಟಾಸ್ ಗೆದ್ದು ಮೊದಲು ಬೌಲಿಂಗ್ ನಡೆಸುವ ನಿರ್ಧಾರ ಕೈಗೊಂಡ ಇಂಗ್ಲೆಂಡ್ ನಾಯಕ ಮಾರ್ಗನ್ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ನಡೆಸಿದ ಇಂಗ್ಲೆಂಡ್ ಬೌಲರುಗಳು ಆಸ್ಟ್ರೇಲಿಯಾಕ್ಕೆ ಎಲ್ಲೂ ಎದ್ದು ನಿಲ್ಲುವ ಅವಕಾಶ ನೀಡಲಿಲ್ಲ. ಹಂತದಲ್ಲಿ 51 ರನ್ನಿಗೆ 5 ವಿಕೆಟ್ ಕಳೆದುಕೊಂಡು ನೂರರ ಒಳಗೆ ಆಲೌಟ್ ಆಗುವ ಸೂಚನೆ ನೀಡಿದ್ದ ಆಸೀಸ್ ನಾಯಕ ಫಿಂಚ್ ಹಾಗು ಕೊನೆಯಲ್ಲಿ ಬಂದ ಬಾಲಂಗೋಚಿಗಳ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನೂರರ ಗಡಿ ದಾಟಿ ೨೦ ಓವರುಗಳಲ್ಲಿ 125 ರನ್ನು ಪೇರಿಸಿ ಆಲೌಟ್ ಆಯಿತು. ಇದರಲ್ಲಿ ನಾಯಕ ಫಿಂಚ್ ಕೊಡುಗೆ 44 ರನ್.

ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಹೊಡೆಬಡಿಯ ಆಟಕ್ಕೆ ಶುರುವಿಟ್ಟುಕೊಂಡು ಓವರಿಗೆ ತಲಾ 10ರ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತ ಸಾಗಿತು. ಬಿರುಗಾಳಿಯ ಆಟವಾಡಿದ ಜೋಸ್ ಬಟ್ಲರ್ ಕೇವಲ 32 ಬಾಲುಗಳಿಂದ 71 ರನ್ ಬಾರಿಸಿದರು. ಇದರಲ್ಲಿ 5 ಬೌಂಡರಿ, 5 ಭರ್ಜರಿ ಸಿಕ್ಸರ್ ಒಳಗೊಂಡಿತ್ತು. ಉಳಿದಂತೆ ಜೇಸನ್ ರಾಯ್ 22, ಜಾನಿ ಬೈರ್ಸ್ಟೋ 16 ರನ್ ಗಳಿಸಿದರು.

Exit mobile version