Sports

ಟಿ20 ವಿಶ್ವಕಪ್: ಭಾರತದ ಹೀನಾಯ ಪ್ರದರ್ಶನಕ್ಕೆ ಅಭಿಮಾನಿಗಳಿಂದ ಟೀಕೆಗಳ ಸುರಿಮಳೆ

ಹೊಸದಿಲ್ಲಿ: ಟಿ20 ವಿಶ್ವಕಪ್ ಗೂ ಮುನ್ನ ಕಪ್ ಗೆಲ್ಲುವ ಫೆವರಿಟ್ ತಂಡವೆಂದೇ ಪರಿಗಣಿಸಲ್ಪಟ್ಟಿದ್ದ ಭಾರತ ತಂಡ ಸತತ ಎರಡು ಲೀಗ್ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಎಲ್ಲ ಕಡೆ ಟೀಕೆಗಳ ಸುರಿಮಳೆ ಸುರಿಯುತ್ತಿದೆ.

ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯ ಸೋತ ಬಳಿಕ ಪರವಾಗಿಲ್ಲ ಪ್ರತಿ ಸಲವೂ ಗೆಲ್ಲೋಕೆ ಆಗುವುದಿಲ್ಲ ಎಂದು ಸುಮ್ಮನಾಗಿದ್ದ ಅಭಿಮಾನಿಗಳು ನ್ಯೂಜಿಲ್ಯಾನ್ಡ್ ವಿರುದ್ಧವೂ ಮತ್ತದೇ ಕಳಪೆ ಪ್ರದರ್ಶನ ನೀಡಿದ ನಂತರ ಸಿಡಿದು ನಿಂತಿದ್ದಾರೆ. ಕೇವಲ ಐಪಿಎಲ್ ಗಾಗಿ ಆಡಬೇಡಿ , ದೇಶಕ್ಕಾಗಿ ಆಡಿ ತೋರಿಸಿ ಎಂದು ಕೋಪ ಹೊರಹಾಕಿದ್ದಾರೆ.

ಕೇವಲ ಐಪಿಎಲ್ ಅನ್ನೇ ಇವರುಗಳು ಕ್ರಿಕೆಟ್ ಎಂದುಕೊಂಡಂತಿದೆ. ದೇಶಕ್ಕಾಗಿ ಆಡುವುದನ್ನೇ ಮರೆತುಬಿಟ್ಟಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಬಿಸಿಸಿಐ ಹಾಗು ಐಪಿಲ್ ಎರಡನ್ನೂ ದೂಷಿಸಿದ್ದಾರೆ. ಇನ್ನು ಕೆಲವು ಮಂದಿ ಕೊಹ್ಲಿಗೆ ವಿಶ್ವಕಪ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವುದು ಇನ್ನೂ ತಿಳಿದಿಲ್ಲ ಎಂದು ಕಾಲೆಳೆದಿದ್ದಾರೆ. ಬಹುಶ ಹೆಚ್ಚಿನವರಿಗೆ ಮಹೇಂದ್ರ ಸಿಂಗ್ ಧೋನಿಯವರ ನಾಯಕತ್ವದ ಮಹತ್ವ ಈಗ ತಿಳಿದಿರಬಹುದು ಎಂದು ಧೋನಿ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಮುಂದುವರೆದ ಅಭಿಮಾನಿಗಳು, ಕೊಹ್ಲಿ ಹಾಗು ಕೋಚ್ ರವಿ ಇಬ್ಬರೂ ತಮ್ಮ ತಮ್ಮ ಸ್ಥಾನದಿಂದ ಈ ವಿಶ್ವಕಪ್ ನಂತರ ಕೆಳಗಿಳಿಯುವುದರಿಂದ ಈಗ ಅವರಿಗೆ ನೋಟೀಸ್ ಪೀರಿಯಡ್ ಆಗಿದೆ. ನೋಟೀಸ್ ಪೀರಿಯಡ್ ನಲ್ಲಿ ಯಾವ ಉದ್ಯೋಗಿಯಾದರೂ ಸರಿಯಾಗಿ ಕೆಲಸ ಮಾಡುವುದನ್ನೂ ನೋಡಿದ್ದೀರಾ ಎಂದು ವ್ಯಂಗ್ಯವಾಡಿದ್ದಾರೆ.

Exit mobile version