
ತನ್ನ ಕೊರೋನಾದ ವಿರುದ್ಧದ ಹೋರಾಟದ ಭಾಗವಾಗಿ, 100 ಕೋಟಿ ವ್ಯಾಕ್ಸಿನ್ ಡೋಸ್‌ಗಳನ್ನು ನೀಡಿ ಭಾರತ ಯಶಸ್ಸನ್ನು ಸಾಧಿಸುತ್ತಿದ್ದರೆ, ಭಾರತದ ಸೈನಿಕರ ಒಂದು ತುಕಡಿ ಅಮೆರಿಕದ ಸೈನ್ಯದ ತುಕಡಿಯೊಂದಿಗೆ “ಯುದ್ಧ ಅಭ್ಯಾಸ್” ಎಂಬ ಸಮರಾಭ್ಯಾಸವನ್ನು ಅಮೆರಿಕದ ಅಲಾಸ್ಕಾದಲ್ಲಿ ನಡೆಸುತ್ತಿತ್ತು. ಈ ಸಮರಾಭ್ಯಾಸವು ಎರಡೂ ದೇಶದ ಸೈನ್ಯಗಳ ನಡುವಣ ಸಹಕಾರ, ಹೊಂದಾಣಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಕೂಡಿರುವುದಲ್ಲದೆ, ಭಯೋತ್ಪಾದಕ ವಿರೋಧಿ ಕಾರ್ಯತಂತ್ರವನ್ನು ಕೂಡ ಸಮರ್ಥವಾಗಿ ರೂಢಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಇದೇ ಸಂದರ್ಭದಲ್ಲಿ ಮಲಬಾರ್ ಸಮರಾಭ್ಯಾಸದ 2021ನೆಯ ವರ್ಷದ ಎರಡನೆಯ ಆವೃತ್ತಿ ಬಂಗಾಳ ಕೊಲ್ಲಿಯಲ್ಲಿ ನಡೆಯಿತು. ಈ ಸಮರಾಭ್ಯಾಸದಲ್ಲಿ ಕ್ವಾಡ್ ಕೂಟದ ಎಲ್ಲ ನಾಲ್ಕು ರಾಷ್ಟ್ರಗಳೂ ಭಾಗವಹಿಸಿದ್ದವು. ಈ ಸಮರಾಭ್ಯಾಸಗಳು ಭಾರತ ಅಮೆರಿಕ ಸಂಬಂಧ ಉನ್ನತ ಹಂತಕ್ಕೆ ತಲುಪಿರುವುದನ್ನು ಸೂಚಿಸುತ್ತವೆ. ಅಲ್ಲದೆ ಭಾರತ ಅಮೆರಿಕದೊಂದಿಗೆ ನಡೆಸುವ 2+2 ಮಾತುಕತೆಯೂ ಕೂಡ ಭಾರತ ಅಮೆರಿಕ ಸಂಬಂಧದ ಗಾಢತೆಯ ಬಗ್ಗೆ ಹೇಳುತ್ತದೆ. ಈ ಮಾತುಕತೆಯಲ್ಲಿ ಎರಡೂ ದೇಶಗಳ ವಿದೇಶಾಂಗ ಸಚಿವರು ಹಾಗೂ ರಕ್ಷಣಾ ಸಚಿವರು ಭಾಗವಹಿಸಿರುತ್ತಾರೆ.
ಹಾಗೆಂದು ಎರಡೂ ದೇಶಗಳ ನಡುವೆ ಅಪಸ್ವರವೇ ಇಲ್ಲವೆಂದಲ್ಲ, ಭಾರತ ರಷ್ಯಾದಿಂದ ಖರೀದಿಸಲು ನಿರ್ಧರಿಸಿರುವ ಎಸ್-400 ವಾಯುರಕ್ಷಣಾ ವ್ಯವಸ್ಥೆಗೆ ಅಮೆರಿಕದ (ಕ್ಯಾಟ್ಸಾ) ಕಾನೂನು ತೊಡಕನ್ನುಂಟು ಮಾಡುತ್ತಿದೆ. ಭಾರತ ರಷ್ಯಾದಿಂದ ಎಸ್-400 ವಾಯುರಕ್ಷಣಾ ವ್ಯವಸ್ಥೆಯನ್ನು ಪಡೆದುಕೊಂಡಿದ್ದೇ ಆದಲ್ಲಿ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಬಿಡೆನ್ ಆಡಳಿತ ಎಚ್ಚರಿಕೆಯನ್ನು ನೀಡಿದೆ.
ಆದರೆ ಈ ಕಾನೂನಿನಿಂದ ವಿನಾಯಿತಿ ನೀಡುವ ಅಧಿಕಾರವನ್ನು ಅಮೆರಿಕ ಅಧ್ಯಕ್ಷರು ಹೊಂದಿದ್ದಾರೆ. ಹಾಗಾಗಿ ಭಾರತವು ಈ ವಿನಾಯಿತಿಯನ್ನು ಪಡೆದುಕೊಳ್ಳುವ ಆಶಾ ಭಾವನೆಯಲ್ಲಿದ್ದು ಎಸ್-400 ವಾಯುರಕ್ಷಣಾ ವ್ಯವಸ್ಥೆಯನ್ನು ಪಡೆದುಕೊಳ್ಳುವತ್ತ ಗಮನ ಹರಿಸಿದೆ. ಇಲ್ಲಿ ಭಾರತ ರಷ್ಯಾದೊಂದಿಗಿನ ತನ್ನ ದೀರ್ಘಕಾಲದ ಗೆಳೆತನವನ್ನು ಉಳಿಸಿಕೊಂಡು, ಅಮೆರಿಕದೊಂದಿಗೆ ಹತ್ತಿರ ಸಂಬಂಧ ಹೊಂದಲು ಪ್ರಯತ್ನಿಸುತ್ತಿರುವುದು ಅತ್ಯಂತ ಸ್ಪಷ್ಟ.
ಅಮೆರಿಕ ಹಾಗೂ ರಷ್ಯಾ ಎರಡರೊಡನೆಯೂ ಸಂಬಂಧವನ್ನು ಜಾಗರೂಕತೆಯಿಂದ ನಿಭಾಯಿಸುವುದು ಭಾರತಕ್ಕೆ ಅನಿವಾರ್ಯ. ವಿಶ್ವ ರಾಜಕೀಯ ಇತಿಹಾಸವನ್ನು ಗಮನಿಸಿದಾಗ ಒಂದು ದೇಶಕ್ಕೆ ಖಾಯಂ ಮಿತ್ರರೂ, ಖಾಯಂ ಶತ್ರುಗಳೂ ಇರುವುದಿಲ್ಲ ಎಂದೇ ಹೇಳಬಹುದು. ಅಮೆರಿಕಾ ಹಾಗೂ ರಷ್ಯಾದೊಂದಿಗಿನ ಭಾರತದ ಸಂಬಂಧವನ್ನು ಗಮನಿಸಿದಾಗಲೂ ಇದೇ ಅಂಶ ಸಾಬೀತಾಗುತ್ತದೆ. ಸ್ವಾತಂತ್ರ್ಯವನ್ನು ಪಡೆದ ನಂತರ ಭಾರತ ಯಾವ ಬಣಕ್ಕೂ ಸೇರದ ಅಲಿಪ್ತ ರಾಷ್ಟ್ರವಾಗಿ ಗುರುತಿಸಿಕೊಂಡಿತ್ತು. ಆದರೆ 1962ರ ಚೀನಾದೊಂದಿಗಿನ ಯುದ್ಧ ಭಾರತದ ವಿದೇಶಾಂಗ ನೀತಿಯ ಪರೀಕ್ಷಾ ಸಮಯ ಎಂದೇ ಹೇಳಬಹುದು. ಜಗತ್ತಿನ ಗಮನವೆಲ್ಲ ಕ್ಯೂಬಾದೊಂದಿಗಿನ ಕ್ಷಿಪಣಿ ಬಿಕ್ಕಟ್ಟಿನ(Cuban Missile Crisis) ಕಡೆಗೆ ನೆಟ್ಟಿರುವಾಗ ಚೀನಾದ ಸೇನೆ ಭಾರತದ ನೆಲದ ಮೇಲೆ ದಾಳಿ ಮಾಡಿತು. ಭಾರತದೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದರೂ, ಭಾರತಕ್ಕೆ ನೆರವಾಗಲು ಅಂದಿನ ಸೋವಿಯತ್ ಒಕ್ಕೂಟ (ರಷ್ಯಾ) ನಿರಾಕರಿಸಿತು. ಕಂಗಾಲಾಗಿದ್ದ ಭಾರತದ ಅಂದಿನ ಪ್ರಧಾನಿ ನೆಹರೂ ಸಹಾಯಕ್ಕಾಗಿ ಅಮೆರಿಕಾ ಹಾಗೂ ಬ್ರಿಟನ್‌ಗೆ ಪತ್ರ ಬರೆದರು. ಅಮೆರಿಕದ ಅಂದಿನ ಅಧ್ಯಕ್ಷ ಜಾನ್ ಕೆನಡಿ ಭಾರತಕ್ಕೆ ಸೇನಾ ನೆರವು ನೀಡಲು ಸಿದ್ಧವಾದ ಸುದ್ದಿ ತಿಳಿದ ಚೀನಾ ಏಕಪಕ್ಷೀಯವಾಗಿ ಕದನ ವಿರಾಮವನ್ನು ಘೋಷಿಸಿತು. ಇಲ್ಲಿ ಭಾರತಕ್ಕೆ ನೆರವು ನೀಡಲು ಅಮೆರಿಕ ತೋರಿದ ಉತ್ಸುಕತೆ ಹಾಗೂ ನೆರವಿಗೆ ಬಾರದ ಸೋವಿಯತ್ ಒಕ್ಕೂಟದ ನಿಲುವುಗಳು ಗಮನಾರ್ಹ.
1962ರ ಚೀನಾದೊಂದಿಗಿನ ಯುದ್ಧದಲ್ಲಿ ಆದ ಮುಖಭಂಗದಿಂದ ಭಾರತೀಯ ಸೇನೆಯ ನೈತಿಕ ಬಲ ಉಡುಗಿತ್ತು ಎಂದೇ ಹೇಳಬಹುದು. ಇದನ್ನೇ ಸಮಯಾವಕಾಶವೆಂದು ಭಾವಿಸಿದ ಪಾಕಿಸ್ತಾನ ಭಾರತದ ಮೇಲೆ 1965ರಲ್ಲಿ ಯುದ್ಧ ಸಾರಿತು.ಈ ಸಂದರ್ಭದಲ್ಲಿ ಪಾಕಿಸ್ತಾನ ಸೆಂಟೋ ಹಾಗೂ ಸಿಯಾಟೋ ಮೈತ್ರಿಕೂಟದ ಭಾಗವಾಗಿದ್ದರೂ, ಅಮೆರಿಕ ಪಾಕಿಸ್ತಾನಕ್ಕೆ ನೆರವು ನೀಡದೆ ತಟಸ್ಥವಾಯಿತು.1965ರ ಯುದ್ಧದ ಪ್ರಾರಂಭದಲ್ಲಿ ಸೋವಿಯತ್ ಒಕ್ಕೂಟ (ರಷ್ಯಾ) ತಟಸ್ಥವಾಗಿದ್ದರೂ, ಯುದ್ಧದ ಗತಿ ಬದಲಾದಂತೆ ಚೀನಾ ಯುದ್ಧವನ್ನು ಪ್ರವೇಶಿಸದಂತೆ ಸೋವಿಯತ್ ಒತ್ತಡ ಹೇರಿತು. ಆದರೆ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದ ಭಾರತವನ್ನು ಒತ್ತಡದ ಮೂಲಕ ಕದನ ವಿರಾಮಕ್ಕೆ ಒಪ್ಪುವಂತೆ ಮಾಡುವಲ್ಲಿ ಅಮೆರಿಕ ಹಾಗೂ ಸೋವಿಯತ್ ಒಕ್ಕೂಟಗಳೆರಡೂ ಪಾತ್ರವನ್ನು ವಹಿಸಿದ್ದವು. ಆದರೆ ಅಮೆರಿಕ ಹಾಗೂ ಸೋವಿಯತ್ ಒಕ್ಕೂಟದ ಧೋರಣೆಗಳಲ್ಲಿ ಸ್ವಹಿತಾಸಕ್ತಿಯೇ ಮುಖ್ಯವಾಗಿತ್ತು. ಹಾಗಾಗಿ ಅಂತಾರಾಷ್ಟ್ರೀಯ ಸಂಬಂಧಗಳು ಸಿದ್ದಾಂತಗಳಿಗಿಂತˌ ಭಾವನೆಗಳಿಗಿಂತ ಒಂದು ದೇಶದ ಸ್ವಹಿತಾಸಕ್ತಿಯ ಮೇಲೆ ಅವಲಂಬಿತವಾಗಿದೆ ಎನ್ನಬಹುದು. ಇದನ್ನು ನಾವು 1971ರ ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿಯೂ ನೋಡಬಹುದು.
1970ರ ಸುಮಾರಿಗೆ ಚೀನಾ ಹಾಗೂ ಸೋವಿಯತ್ ಒಕ್ಕೂಟದ ನಡುವೆ ಆಳವಾದ ಬಿರುಕುಗಳು ಕಾಣುತ್ತಿದ್ದವು. ಸೋವಿಯತ್ ಒಕ್ಕೂಟವನ್ನು ಹಣಿಯಲು ಅಮೆರಿಕ ಚೀನಾದ ಸಂಗ ಬೆಳೆಸಿತು. ಹಾಗಾಗಿ ಅಮೆರಿಕಾ- ಚೀನಾ – ಪಾಕಿಸ್ತಾನಗಳ ಮೈತ್ರಿ ಕೂಟ ರೂಪುಗೊಂಡಿತ್ತು. ಇದರಿಂದ ವಿಚಲಿತಗೊಂಡಿದ್ದ ಭಾರತ 1971ರಲ್ಲಿ ಸೋವಿಯತ್ ಒಕ್ಕೂಟದೊಂದಿಗೆ ಭಾರತ- ಸೋವಿಯತ್ ಸ್ನೇಹ ಒಪ್ಪಂದಕ್ಕೆ ಸಹಿ ಹಾಕಿತು. 1971ರ ಯುದ್ಧದ ಸಂದರ್ಭದಲ್ಲಿ ಭಾರತವನ್ನು ಬೆದರಿಸಲು ಅಮೆರಿಕ ತನ್ನ ಯುದ್ಧ ನೌಕೆಯನ್ನು ಬಂಗಾಳ ಕೊಲ್ಲಿಗೆ ಕಳುಹಿಸಲು, ಅಂದಿನ ಸೋವಿಯತ್ ಒಕ್ಕೂಟವು ಭಾರತಕ್ಕೆ ಬೆಂಬಲವಾಗಿ ತನ್ನ ಯುದ್ಧ ನೌಕೆಯನ್ನು ಕಳುಹಿಸಿತು. ಅಮೆರಿಕ ಇಲ್ಲಿ ತನ್ನೆಲ್ಲ ಪ್ರಯತ್ನಗಳ ಹೊರತಾಗಿಯೂ ಪಾಕಿಸ್ತಾನದ ವಿಭಜನೆಯನ್ನು ತಡೆಯಲು ವಿಫಲವಾಯಿತು.
1971ರ ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಿಂದಲೂ ಬಿಗಡಾಯಿಸಿದ್ದ ಭಾರತ ಅಮೆರಿಕ ಸಂಬಂಧ ಮತ್ತೆ ಹಳಿಗೆ ಬಂದಿದ್ದು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಅಮೆರಿಕದ ಭೇಟಿಯ ಸಂದರ್ಭದಲ್ಲಿ. ಇದಾದ ಬಳಿಕ ಪಿವಿ ನರಸಿಂಹ ರಾವ್ ಅವರು ಭಾರತ ಅಮೆರಿಕ ಸಂಬಂಧದಲ್ಲಿ ಹೊಸ ಶಕೆ ಉದಯಿಸಲು ಕಾರಣರಾದರು. ಮುಂದಿನ ದಿನಗಳಲ್ಲಿ ಪ್ರಧಾನಿ ವಾಜಪೇಯಿಯವರ ಕಾಲಘಟ್ಟದಲ್ಲಿ ಭಾರತ ಅಮೆರಿಕ ಸಂಬಂಧ ಇನ್ನೂ ಮೇಲ್ದರ್ಜೆಗೆ ಏರಿತು. ನಂತರದ ದಿನಗಳಲ್ಲಿ ಭಾರತ ನಡೆಸಿದ ಅಣ್ವಸ್ತ್ರ ಪರೀಕ್ಷೆಗಳು ಅಮೆರಿಕದ ಕಣ್ಣನ್ನು ಕೆಂಪಾಗಿಸಿದವು. ಆದರೆ ರಷ್ಯಾ ಅಂದಿನ ದಿನಗಳಲ್ಲಿ ಭಾರತದೊಂದಿಗೆ ಸಾಥ್ ನೀಡಿತ್ತು. ರಷ್ಯಾ ಭಾರತಕ್ಕೆ ಕ್ರಯೋಜನಿಕ್ ಎಂಜಿನ್ಗಳನ್ನು ನೀಡಿದ್ದಲ್ಲದೆ, ಭಾರತ ರಷ್ಯಾಗಳು ಜೊತೆಗೂಡಿ ಸೂಪರ್ ಸಾನಿಕ್ ವೇಗದಲ್ಲಿ ಚಲಿಸುವ ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿವೆ. ಭಾರತ ರಷ್ಯಾದ ಪೂರ್ವ ಪ್ರಾಂತ್ಯದ ಅಭಿವೃದ್ಧಿಗಾಗಿ 1 ಬಿಲಿಯನ್‌ಡಾಲರ್ ಹಣಕಾಸು ನೆರವನ್ನು(Line of Credit) ನೀಡಿದೆ. ಭಾರತ ರಷ್ಯಾ ಜಪಾನ್‌ಗಳು ಸೇರಿ ವಿವಿಧ ರಂಗಗಳ ಸಹಕಾರಕ್ಕಾಗಿ ತ್ರಿಪಕ್ಷೀಯ ಕೂಟವನ್ನು ಹುಟ್ಟುಹಾಕಿವೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿಯೂ ರಷ್ಯಾ ಭಾರತದೊಂದಿಗೆ ಕೈ ಜೋಡಿಸಿದೆ.
ಇವೆಲ್ಲವುಗಳ ನಡುವೆ ಭಾರತ ಅಮೆರಿಕದ ಹೆಚ್ಚುತ್ತಿರುವ ಅನ್ಯೋನ್ಯತೆ ರಷ್ಯಾಗೆ ಸಂತಸವನ್ನೇನು ತಂದಿಲ್ಲ. ಚೀನಾವನ್ನು ಇಂಡೋ-ಫೆಸಿಪಿಕ್ ವಲಯದಲ್ಲಿ ಮಟ್ಟಹಾಕುವ ಉದ್ದೇಶವನ್ನು ಹೊಂದಿರುವ “ಕ್ವಾಡ್” ಮೈತ್ರಿಕೂಟವನ್ನು ರಷ್ಯಾ ಅನುಮಾನದ ಕಣ್ಣುಗಳಿಂದಲೇ ನೋಡುತ್ತಿದೆ. ಇತ್ತ ಚೀನಾದ ಬಗ್ಗೆಯೂ ರಷ್ಯಾ ಎಚ್ಚರಿಕೆಯ ನಡೆಯನ್ನೇ ಇರಿಸಿದೆ. ಹೀಗಾಗಿಯೇ ಮದ್ಯ ಏಷ್ಯಾದಲ್ಲಿ ಚೀನಾದ ಪ್ರಭಾವವನ್ನು ಕಡಿಮೆಗೊಳಿಸಲು ಶಾಂಘೈ ಸಹಕಾರ ಸಂಸ್ಥೆ(SCO)ಗೆ ಭಾರತ ಸೇರ್ಪಡೆಗೆ ರಷ್ಯಾ ಬೆಂಬಲವಾಗಿ ನಿಂತಿತು.
ಶೀತಲ ಸಮರದ ದಿನಗಳಲ್ಲಿ ಜಗತ್ತು ದ್ವಿದೃವ(bipolar)ವಾಗಿತ್ತು. ಶೀತಲ ಸಮರ ಕೊನೆಗೊಂಡಾಗ ಜಗತ್ತು ಏಕ ದೃವೀಯ(unipolar)ವಾಯಿತು. ಇಂದಿನ ದಿನಗಳಲ್ಲಿ ಜಗತ್ತು ಬಹುದೃವೀಯ(multi- polar) ಎನಿಸಿದೆ. ಹಾಗಲ್ಲದೆ ಭಯೋತ್ಪಾದನೆಯನ್ನು ರಫ್ತು ಮಾಡುವ ಪಾಕಿಸ್ತಾನ ಹಾಗೂ ವಿಸ್ತರಣವಾದವ(expansionism)ನ್ನು ನೀತಿಯನ್ನಾಗಿ ಹೊಂದಿರುವ ಚೀನಾಗಳನ್ನು ನೆರೆಹೊರೆಯ ದೇಶಗಳನ್ನಾಗಿ ಹೊಂದಿರುವ ಭಾರತಕ್ಕೆ ಬೇರೆ ಬೇರೆ ದೇಶಗಳೊಂದಿಗೆ ನಿಕಟ ಸಂಬಂಧವನ್ನು ಹೊಂದುವುದು ಅನಿವಾರ್ಯವಾಗಿದೆ.
ಹೀಗೆ ಭಾರತ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾ, ತನ್ನ ಮಿತ್ರ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿ, ಪ್ರಬಲ ಆರ್ಥಿಕ ಹಾಗೂ ಮಿಲಿಟರಿ ಶಕ್ತಿಯಾಗಿ ಬೆಳೆಯುವುದು ಅತಿ ಮುಖ್ಯ. ಆ ದಿಶೆಯಲ್ಲಿ ಭಾರತ ಇಂದು ಸಾಗುತ್ತಿದೆ ಎನ್ನಬಹುದು.