ಲಂಡನ್ : ಇಲ್ಲಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗು ಇಂಗ್ಲೆಂಡ್ ತಂಡಗಳ ನಡುವಿನ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಭಾರತ 151 ರನ್ನುಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತಂಡ ಆರಂಭಿಕರಾದ ಕೆ. ಎಲ್. ರಾಹುಲ್ ಅವರ ಅಮೋಘ ಶತಕ (129 ರನ್) ಹಾಗು ರೋಹಿತ್ ಶರ್ಮರ ಅರ್ಧ ಶತಕದ (83) ನೆರವಿನಿಂದ 364 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿರಿಂದ 42 ರನ್ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಅವರಿಂದ 40 ರನ್’ಗಳ ಕೊಡುಗೆ ಹರಿದು ಬಂತು. ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 62 ರನ್ ನೀಡಿ 5 ವಿಕೆಟ್ ಪಡೆದರು.
ಉತ್ತರವಾಗಿ ಮೊದಲ ಇನ್ನಿಂಗ್ಸ್ ಆಡಲಿಳಿದ ಇಂಗ್ಲೆಂಡ್ ತಂಡ ನಾಯಕ ರೂಟ್ ಅವರ ಅಜೇಯ 180 ರನ್ ನೆರವಿನಿಂದ 391 ರನ್ ಗಳಿಸಿ ಮೊದಲ ಇನ್ನಿಂಗ್ಸ್’ನಲ್ಲಿ ಅಮೂಲ್ಯ 27 ರನ್’ಗಳ ಮುನ್ನಡೆ ಪಡೆಯಿತು. ಬೈರ್ಸ್ಟೋ 57 ಹಾಗು ಬರ್ನ್ಸ್ 49 ರನ್ ಗಳಿಸಿ ತಂಡಕ್ಕೆ ಉತ್ತಮ ಬೆಂಬಲ ನೀಡಿದರು. ಮೊಹಮ್ಮದ್ ಸಿರಾಜ್ 4, ಇಶಾಂತ್ ಶರ್ಮ 3 ವಿಕೆಟ್ ಕಿತ್ತು ಇಂಗ್ಲೆಂಡ್ ಮುನ್ನಡೆ ಹೆಚ್ಚದಂತೆ ನೋಡಿಕೊಂಡರು.
ಮೊದಲ ಇನ್ನಿಂಗ್ಸ್ ನ ಶತಕವೀರ ಕೆ.ಎಲ್. ರಾಹುಲ್ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 5 ರನ್ನಿಗೆ ಒಪ್ಪಿಸಿದರೆ, ರೋಹಿತ್ ಶರ್ಮ 21 ರನ್ ಗಳಿಸಲಷ್ಟೇ ಶಕ್ತರಾದರು. ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ (45) ಹಾಗು ಅಜಿಂಕ್ಯ ರಹಾನೆ (61) ಭಾರತಕ್ಕೆ ಆಸರೆಯಾದರು. ಅಜಿಂಕ್ಯ ರಹಾನೆ ಪೆವಿಲಿಯನ್ ಸೇರಿಕೊಂಡ ಬಳಿಕ ಬಂದ ರಿಷಬ್ ಪಂತ್ ಹಾಗು ಜಡೇಜಾ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಆಗ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 194. ಮುಂದೆ ಯಾರೂ ಊಹಿಸಿರದ ರೀತಿ ಬ್ಯಾಟ್ ಬೀಸಿದ ಮೊಹಮ್ಮದ್ ಶಮಿ ಹಾಗು ಜಸ್ಪ್ರೀತ್ ಬುಮ್ರಾ 9ನೇ ವಿಕೆಟಿಗೆ ಅಜೇಯ 89 ರನ್ ಸೇರಿದರು. ವೇಗವಾಗಿ ರನ್ ಕಲೆಹಾಕಿದ ಶಮಿ ಅಜೇಯ 56 ರನ್ ಪೇರಿಸುವ ಮೂಲಕ ತನ್ನ ಟೆಸ್ಟ್ ಜೀವನದ ಎರಡನೆಯ ಅರ್ಧ ಶತಕ ಪೂರೈಸಿದರು. ಶಮಿಗೆ ಉತ್ತಮ ಬೆಂಬಲ ನೀಡಿದ ಬುಮ್ರಾ ಅಜೇಯ 34 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ 298 ಆದಾಗ ನಾಯಕ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು.
ಇವರಿಬ್ಬರ ಅಜೇಯ 89 ರನ್ ಜತೆಯಾಟ ಇಂಗ್ಲೆಂಡ್ ನೆಲದಲ್ಲಿ 9ನೇ ವಿಕೆಟಿಗೆ ಭಾರತೀಯ ಜೋಡಿ ಪೇರಿಸಿದ ಅತ್ಯಧಿಕ ಮೊತ್ತ ಎಂಬ ದಾಖಲೆ ಬರೆಯಿತು. 1982ರಲ್ಲಿ ಇದೇ ಲಾರ್ಡ್ಸ್ ಅಂಗಳದಲ್ಲಿ ಕಪಿಲ್ ದೇವ್ ಹಾಗು ಮದನ್ ಲಾಲ್ ನಡುವಿನ 66 ರನ್ ಜತೆಯಾಟ ಇದುವರೆಗಿನ ದಾಖಲೆಯಾಗಿತ್ತು.
ಗೆಲುವಿಗೆ 272 ರನ್ನುಗಳ ಗುರಿ ಪಡೆದ ಇಂಗ್ಲೆಂಡ್ ಭಾರತೀಯ ಬೌಲರ್’ಗಳ ಮಾರಕ ಧಾಳಿಗೆ ತತ್ತರಿಸಿತು. ಎರಡನೇ ಇನ್ನಿಂಗ್ಸ್’ನಲ್ಲಿ ಕೇವಲ 120 ರನ್ನುಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ ಶರಣಾಯಿತು. ಭಾರತದ ಪರ ಸಿರಾಜ್ 4 ಮತ್ತು ಬುಮ್ರಾ 3 ವಿಕೆಟ್ ಪಡೆದು ಮಿಂಚಿದರು.












































