
ಟೋಕಿಯೋ: ಈ ಬಾರಿಯ ಪ್ಯಾರಾ ಒಲಿಂಪಿಕ್ ನಲ್ಲಿ ಭಾರತದ ಅದ್ವಿತೀಯ ಸಾಧನೆ ಮುಂದುವರೆದಿದ್ದು ಇಂದು ಮತ್ತೆ 3 ಪದಕಗಳನ್ನು ಬಾಚಿಕೊಂಡಿದೆ. ಈ ಪದಕಗಳಿಂದಾಗಿ ಭಾರತ 7 ಪದಕಗಳನ್ನು ಗೆದ್ದುಕೊಂಡಂತಾಗಿದೆ.
ಜಾವೆಲಿನ್ ಥ್ರೋ ಕ್ಲಾಸ್ ಎಫ್ 46 ವಿಭಾಗದಲ್ಲಿ ಭಾರತ ಬೆಳ್ಳಿ ಹಾಗು ಕಂಚು ಎರಡೂ ಪದಕಗಳನ್ನು ತನ್ನ ಕೊರಳಿಗೇರಿಸಿತು. ದೇವೇಂದ್ರ ಜಝಾರಿಯಾ ಬೆಳ್ಳಿ ಜಯಿಸಿದರೆ, ಸುಂದರ್ ಸಿಂಗ್ ಗುರ್ಜ್ಜಾರ್ ಕಂಚಿನ ಪದಕ ಪಡೆದರು. ಡಿಸ್ಕಸ್ ಎಸೆತದಲ್ಲಿ 44.38 ಮೀ ದೂರ ಎಸೆಯುವ ಮೂಲಕ ೨೪ರ ಹರೆಯದ ಯೋಗೇಶ್ ಕತುನಿಯಾ ಬೆಳ್ಳಿ ಗೆದ್ದು ಬೀಗಿದರು.
ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ನಾಯಕರು ಭಾರತೀಯರ ಪರಾಕ್ರಮಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಪ್ರಧಾನಿ ಮೋದಿಯವರಂತೂ ಪ್ರತಿ ಕ್ಷಣದ ಅಪ್ಡೇಟ್ ಪಡೆದು ಗೆದ್ದ ಪ್ರತಿ ಒಬ್ಬ ಆಟಗಾರನನ್ನು ವಯಕ್ತಿಕವಾಗಿ ನೆನೆದು ಟ್ವೀಟ್ ಮಾಡುತ್ತಿದ್ದಾರೆ. ಈ ಹಿಂದೆಯೂ ಟೋಕಿಯೋ ಒಲಿಂಪಿಕ್ ಸಂದರ್ಭ ಗೆದ್ದ ತಂಡದ ಪ್ರತಿ ಆಟಗಾರರಿಗೆ ಕರೆ ಮಾಡಿ ಮೋದಿ ಅಭಿನಂದನೆ ಸಲ್ಲಿಸುವ ದೃಶ್ಯ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು.