Movie

ರಿಷಬ್ ಶೆಟ್ಟಿ ಕಾಂತಾರ ಚಿತ್ರೀಕರಣ ಶುರು: ಕುಂಭಾಶಿಯಲ್ಲಿ ಮುಹೂರ್ತ

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಘೋಷಣೆಯಾಗಿರುವ ‘ಕಾಂತರ’ ಚಿತ್ರಕ್ಕೆ ಮುಹೂರ್ತ ನಡೆದು ಚಿತ್ರೀಕರಣ ಶುರು ಆಗಿದೆ.

ಕುಂದಾಪುರದ ಕುಂಭಾಶಿಯ ಆನೆಗುಡ್ಡೆ ದೇಗುಲದಲ್ಲಿ ನಡೆದ ಮೂಹೂರ್ತ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಸಹೋದರ ಮಂಜುನಾಥ್ ಆರಂಭ ಫಲಕ ತೋರಿದರು. ಸ್ಥಳೀಯ ಉದ್ಯಮಿ ಉದಯ್ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿದರು. ಚಿತ್ರದ ಮೊದಲ ಹಂತದ ಚಿತ್ರೀಕರಣ ಕುಂದಾಪುರ ಸುತ್ತಮುತ್ತ ಕೆರಾಡಿ, ಹೆಮ್ಮಾಡಿ ಪ್ರದೇಶಗಳಲ್ಲಿ ನಡೆಯಲಿದೆ. ಮುಂದಿನ ವರ್ಷ ಚಿತ್ರ ತೆರೆಗೆ ಬರಲಿದ್ದು ಈ ವರ್ಷಾಂತ್ಯಕ್ಕೆ ಚಿತ್ರದ ಕೆಲಸಗಳು ಪೂರ್ಣಗೊಳ್ಳಲಿವೆ.

ಹೊಂಬಾಳೆ ಬ್ಯಾನರಿನ 11ನೇ ಸಿನೆಮಾ ಇದಾಗಿದ್ದು ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನ ಜತೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ರಿಷಬ್ ಗೆ ನಾಯಕಿಯಾಗಿ ಸಪ್ತಮಿ ಗೌಡ ಜತೆಯಾಗಿದ್ದ್ದಾರೆ. ಉಳಿದಂತೆ ಕಿಶೋರ್, ಅಚ್ಚುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಕಾಂತಾರ ತಂಡದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಕಾಂತಾರಕ್ಕಿದೆ.

ಹೆಸರಾಂತ ಹೊಂಬಾಳೆ ಫಿಲಂಸ್ ಹಾಗು ಸದಭಿರುಚಿಯ ನಿರ್ದೇಶಕ ರಿಷಬ್ ಶೆಟ್ಟಿ ಜತೆಯಾಗಿರುವುದರಿಂದ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಮೂಡಿದೆ.

ರಿಷಬ್ ಶೆಟ್ಟಿ ಪಟ್ಟಿಯಲ್ಲಿ ರುದ್ರಪ್ರಯಾಗ, ನಾಥೂರಾಮ್, ಬೆಲ್ ಬಾಟಮ್ 2, ಹರಿಕತೆ ಅಲ್ಲ ಗಿರಿ ಕತೆ, ಗರುಡಗಮನ ವೃಷಭ ವಾಹನ ಚಿತ್ರಗಳು ಇದ್ದು ಈ ವರ್ಷದೊಳಗೆ ಇದರಲ್ಲಿ ಕೆಲವು ಚಿತ್ರಗಳು ತೆರೆ ಕಾಣಲಿವೆ.

Exit mobile version