Sports

ಟಿ20 ವಿಶ್ವಕಪ್: ಬಾಂಗ್ಲಾ ಹುಲಿಗಳ ದಿಟ್ಟ ಹೋರಾಟ, ಭಾರತಕ್ಕೆ 5 ರನ್ ರೋಚಕ ಜಯ

ಅಡಿಲೇಡ್: ಟಿ20 ವಿಶ್ವಕಪ್ ನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಮಳೆಕಾಟದ ಹೊರತಾಗಿಯೂ ಭಾರತ ತಂಡ ರೋಚಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಭಾರತಕ್ಕೆ ಠಕ್ಕರ್ ಕೊಡುವಂತೆ ಆಡಿದ ಬಾಂಗ್ಲಾ ಹುಲಿಗಳ ದಿಟ್ಟ ಹೋರಾಟ ಗೆಲುವಾಗಿ ಪರಿವರ್ತನೆಯಾಗುವಲ್ಲಿ ವಿಫಲವಾಯಿತು.

ಭಾರತ ನೀಡಿದ್ದ 185 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ ಆರಂಭ ಉತ್ತಮವಾಗಿತ್ತು. ಹೊಡೆಬಡಿಯ ಆಟವಾಡುತ್ತಾ ಸಾಗಿದ ಬಾಂಗ್ಲಾ ಆರಂಭಿಕ ಆಟಗಾರ ಲಿಟಿನ್ ದಾಸ್ ಕೇವಲ 27 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 60ರನ್ ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಜ್ಮಲ್ ಹುಸೇನ್ ಶಾಂತೋ 25 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 21 ರನ್ ಗಳಿಸಿದರು.

ಪ್ರತಿ ಓವರಿಗೆ ಸರಾಸರಿ 10ರಂತೆ ರನ್ ಗಳಿಸುತ್ತಿದ್ದ ಸಂದರ್ಭ ಪಂದ್ಯ ಬಹುತೇಕ ಬಾಂಗ್ಲಾ ಪರವಾಗಿತ್ತು. ಆಗ ಮಳೆ ಸುರಿಯಲು ಆರಂಭವಾಯಿತು. ಸುಮಾರು ಅರ್ಧಗಂಟೆಗಳ ಕಾಲ ಸುರಿದ ಮಳೆ ಬಳಿಕ ನಿಂತಿತು. ಒಂದು ವೇಳೆ ಮಳೆ ಮುಂದುವರೆದು ಪಂದ್ಯ ಅಷ್ಟಕ್ಕೇ ನಿಂತಿದ್ದಾರೆ ಡಕ್ವಾರ್ಥ್ ನಿಯಮ ಪ್ರಕಾರ ಬಾಂಗ್ಲಾ ತಂಡವನ್ನು ವಿಜಯಿಯೆಂದು ಘೋಷಿಸಲಾಗುತಿತ್ತು. ಮಳೆ ನಿಂತ ಕಾರಣ ಪಂದ್ಯವನ್ನು 16 ಓವರುಗಳಿಗೆ ಸೀಮಿತಗೊಳಿಸಿ ಮರು ಆರಂಭಿಸಲಾಯಿತು. 16 ಓವರುಗಳಲ್ಲಿ 151 ರನ್ ಪಡೆಯುವ ಟಾರ್ಗೆಟ್ ನೀಡಲಾಯಿತು.

ಉತ್ತ್ತಮವಾಗಿ ಆಡುತ್ತಿದ್ದ ದಾಸ್ ಭಾರತದ ರಾಹುಲ್ ಅವರ ಅಮೋಘ ನೇರ ಥ್ರೋ ಮೂಲಕ ರನ್ ಔಟಾಗುವುದರೊಂದಿಗೆ ಪಂದ್ಯ ಭಾರತದತ್ತ ತಿರುಗಿತು. ಮುಂದೆ 9 ರನ್ ಅಂತರದಲ್ಲಿ 4 ವಿಕೆಟ್ ಉರುಳಿ ಬಾಂಗ್ಲಾ ಸ್ಥಿತಿ ಚಿಂತಾಜನಕವಾಯಿತು.ಕೊನೆಗೆ ನೂರುಲ್ ಹಸನ್ ಬಾಂಗ್ಲಾ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದರು. ಕೊನೆಯ ಓವರಿನಲ್ಲಿ 20 ರನ್ ತೆಗೆಯುವ ಸವಾಲು ಬಾಂಗ್ಲಾಗೆ ಮುಳುವಾಯಿತು. ಅರ್ಶದೀಪ್ ಬೌಲಿಂಗಿನಲ್ಲಿ ಒಂದು ಸಿಕ್ಸ್ ಒಂದು ಬೌಂಡರಿ ಹೊಡೆದರೂ ಕೆಲ ಬಾಲುಗಳು ಸರಿಯಾಗಿ ಕನೆಕ್ಟ್ ಆಗದೆ ಬಾಂಗ್ಲಾ 14 ರನ್ ಅಷ್ಟೇ ಗಳಿಸಲು ಶಕ್ತವಾಯಿತು. ಈ ಮೂಲಕ ಭಾರತ 5 ರನ್ನುಗಳಿಂದ ಪಂದ್ಯ ಗೆದ್ದು ಗುಂಪಿನಲ್ಲಿ ಅಗ್ರ ಸ್ಥಾನಕ್ಕೆ ಏರಿತು.

Exit mobile version