
ಟ್ರಿನಿಡಾಡ್: ವೆಸ್ಟ್ ವಿಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವೈಟ್ ವಾಷ್ ಮೂಲಕ ಗೆದ್ದಿರುವ ಭಾರತ ಶುಕ್ರವಾರ ಆರಂಭವಾದ ಟಿ20 ಸರಣಿಯಲ್ಲೂ ಭರ್ಜರಿ ಶುಭಾರಂಭ ಮಾಡಿದೆ. ವಿಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 68 ರನ್ ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಟಾಸ್ ಸೋತು ಬ್ಯಾಟಿಂಗಿಗಿಳಿದ ಭಾರತ ನೀಡಿದ 191 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ಆ ಮೂಲಕ 68 ರನ್ ಗಳ ಅಂತರದಲ್ಲಿ ವಿಂಡೀಸ್ ಪಡೆ ಭಾರತಕ್ಕೆ ಶರಣಾಯಿತು.
ನಾಯಕ ರೋಹಿತ್ ಶರ್ಮಾ (64), ದಿನೇಶ್ ಕಾರ್ತಿಕ್ (41) ಮತ್ತು ಸೂರ್ಯಕುಮಾರ್ ಯಾದವ್ (24) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ, ಎದುರಾಳಿ ತಂಡಕ್ಕೆ 191 ರನ್‌ಗಳ ಬೃಹತ್ ಗುರಿ ನೀಡಿತ್ತು. ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದು ವೆಸ್ಟ್ ವಿಂಡೀಸ್ ತಂಡವನ್ನು ಕಟ್ಟಿ ಹಾಕಿದರು.