HomeArticlesಅಫ್ಘಾನ್ ಪತನ, ತಾಲಿಬಾನ್ 2.0 ಮತ್ತು ಭಾರತ

ಅಫ್ಘಾನ್ ಪತನ, ತಾಲಿಬಾನ್ 2.0 ಮತ್ತು ಭಾರತ

“ಯುದ್ಧ ಕೊನೆಗೊಂಡಿದೆ, ನಮ್ಮ ನಾಯಕರು ಎಲ್ಲರನ್ನೂ ಕ್ಷಮಿಸಿದ್ದಾರೆ..” ಇದು ಅಫ್ಘಾನಿಸ್ತಾನದ 33 ಪ್ರಾಂತ್ಯಗಳನ್ನು ವಶಪಡಿಸಿ ಅಫ್ಘಾನ್ ಸರಕಾರವನ್ನು ಕೆಡವಿದ ಬಳಿಕ ತಾಲಿಬಾನ್ ಉಗ್ರ ಸಂಘಟನೆ ಪತ್ರಿಕಾಗೋಷ್ಠಿ ನಡೆಸಿ ನೀಡಿದ ಹೇಳಿಕೆ. ಅಂದರೆ ಇನ್ನು ಮೇಲೆ ಅಫ್ಘಾನ್ ಶಾಂತವಾಗಿರಲಿದೆಯೇ, ರಾಮರಾಜ್ಯಕ್ಕೆ ಮತ್ತೊಂದು ಹೆಸರಾಗಲಿದೆಯೇ ಎಂಬ ಪ್ರಶ್ನೆಗಳಿಗೆ ಪ್ರಶ್ನೆ ಕೇಳುವವರಲ್ಲಿಯೇ ಉತ್ತರ ಇರುತ್ತವೆ. ಅಷ್ಟರ ಮಟ್ಟಿಗೆ ತಾಲಿಬಾನ್ ಎಲ್ಲರಿಗೂ ಚಿರಪರಿಚಿತ.

ಯುದ್ಧ ಏನೋ ಕೊನೆಗೊಂಡಿರಬಹುದು. ಆದರೆ ಯಾವ ಯುದ್ಧ. 20 ವರ್ಷಗಳ ಹಿಂದೆ ಅಮೇರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ಅನ್ನು ತಾಲಿಬಾನಿಗಳು ಕೆಡವಿದ ಮೇಲೆ ಅಮೇರಿಕ ಪಡೆಗಳು ತಾಲಿಬಾನ್ ಅನ್ನು ಅಫ್ಘಾನಿನಿಂದ ಒದ್ದೋಡಿಸಿದ ನಂತರ ಆರಂಭವಾದ ಯುದ್ಧವಷ್ಟೇ ಕೊನೆಗೊಂಡಿದೆ. ಆದರೆ ಅಂತರ್ಯುದ್ಧ? ಉಹುಂ. ಅದು ತಾಲಿಬಾನ್ ಹುಟ್ಟಿನಿಂದಲೇ ಆರಂಭವಾಗಿರೋದು. ಭಯೋತ್ಪಾದನೆ, ಹಿಂಸಾಚಾರ, ರಕ್ತಪಾತ, ಕೊಲೆ, ಸುಲಿಗೆ, ಅತ್ಯಾಚಾರ ಇವುಗಳು ಕೊನೆಗೊಂಡಿಲ್ಲ, ಕೊನೆಗೊಳ್ಳುವುದೂ ಇಲ್ಲ.

ಅಶ್ರಫ್ ಘನಿ ಆಡಳಿತದ ಪತನವೇನೋ ನಿರೀಕ್ಷಿತವಾಗಿತ್ತು. ಆದರೆ ಮಿಂಚಿನ ವೇಗದ ಪತನವನ್ನು ಮಾತ್ರ ಯಾರೂ ಊಹಿಸಿರಲಿಲ್ಲ. ಅಮೇರಿಕ ಹಾಗು ನ್ಯಾಟೋ ಪಡೆಗಳು ಅಫ್ಘಾನ್ ನಿಂದ ತನ್ನ ಸೈನ್ಯವನ್ನು ವಾಪಸು ಕರೆಸಿಕೊಂಡ ನಂತರ ಒಂದು ವರ್ಷದಲ್ಲಿ ತಾಲಿಬಾನ್ ಮತ್ತೆ ದೊಡ್ಡದಾಗಿ ಬೆಳೆದು ಸರ್ಕಾರವನ್ನು ಕೆಡುವುವ ಹಂತಕ್ಕೆ ಬರಬಹುದು ಅಂದುಕೊಂಡಿತ್ತು ಅಂತರರಾಷ್ಟ್ರೀಯ ಸಮಾಜ. ಬೇರೆಯವರು ಬಿಡಿ, ಸ್ವತಃ ಅಮೆರಿಕವೇ ಈ ರೀತಿ ಯೋಚಿಸಿತ್ತು. ಅಫ್ಘಾನ್ ಸೈನ್ಯ ಶಕ್ತಿಶಾಲಿಯಾಗಿದ್ದು ಕೆಲವೇ ಸಾವಿರದಷ್ಟಿರುವ ತಾಲಿಬಾನಿಗಳಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಅಮೇರಿಕ ಅಧ್ಯಕ್ಷ ಜೋ ಬಿಡೆನ್ ಈ ಹಿಂದೆ ನೀಡಿದ್ದ ಹೇಳಿಕೆಯೇ ಇದಕ್ಕೆ ಸಾಕ್ಷಿ. ಆದರೆ ಆಗಿದ್ದೇನು! ಅಮೇರಿಕ ಪಡೆಗಳ ನಿರ್ಗಮನದ ಕೆಲವೇ ದಿನಗಳಲ್ಲಿ ಪೂರ್ಣ ಅಫ್ಘಾನ್ ತಾಲಿಬಾನ್ ಕೈವಶವಾಯಿತು. ಇದು ವಿಶ್ವದ ಅತೀ ಶಕ್ತಿಶಾಲಿ ಎಂದು ಕರೆಯಿಸಿಕೊಳ್ಳುವ ಅಮೇರಿಕಾದ ಗುಪ್ತಚರ ಇಲಾಖೆಯ ವೈಫಲ್ಯವನ್ನು ಜಗತ್ತಿಗೆ ಮತ್ತೊಮ್ಮೆ ತೋರಿಸಿಕೊಟ್ಟಿತು.

ಇಷ್ಟು ಬೇಗನೆ ಅಫ್ಘಾನ್ ಪತನ ಹೇಗೆ ಸಾಧ್ಯವಾಯಿತು ಎಂದು ನೋಡಿದರೆ ಬೆರಳು ಹೋಗುವುದು ಅದೇ ಅಫ್ಘಾನ್ ಪ್ರಜೆಗಳ ಕಡೆಗೆ. ಇಂದು ತಾಲಿಬಾನ್ ತನ್ನ ಹಿಂದಿನ ಚಾಳಿ ತೋರಿಸುತ್ತಿರುವ ರೀತಿಗೆ ಅಲ್ಲಿನ ಪ್ರಜೆಗಳು ರೋದಿಸುತ್ತಿರಬಹುದು. ನಮ್ಮನ್ನು ರಕ್ಷಿಸಿ ಎಂದು ವಿಶ್ವದ ದೊಡ್ಡ ರಾಷ್ಟ್ರ್ರಗಳತ್ತ ನೋಡುತ್ತಿರಬಹುದು. ಆದರೆ ಅದೇ ಪ್ರಜೆಗಳು ತಾಲಿಬಾನ್ ಆಕ್ರಮಣ ಸಂದರ್ಭದಲ್ಲಿ ತಟಸ್ಥವಾಗಿರದೇ ಅಥವಾ ಬೆಂಬಲ ನೀಡದೇ ಇದ್ದಲ್ಲಿ ತಾಲಿಬಾನ್ ಗೆ ಅಫ್ಘಾನ್ ಕಬ್ಬಿಣದ ಕಡಲೆಯಾಗಿರುತಿತ್ತು. ಅನೇಕ ಪ್ರದೇಶಗಳಲ್ಲಿ, ಸ್ಥಳೀಯರು ವಿದೇಶಿ ಪಡೆಗಳನ್ನು ದ್ವೇಷಿಸುತ್ತಿದ್ದಂತೆಯೇ ಆಫ್ಘನ್ ಭದ್ರತಾ ಪಡೆಗಳನ್ನು ಸಂಪೂರ್ಣವಾಗಿ ದ್ವೇಷಿಸುತ್ತಿದ್ದರು. ಖೋಸ್ಟ್ ಮತ್ತು ಪಾಕ್ತಿಯ ಪ್ರದೇಶಗಳಲ್ಲಿ ಜನರು ಅಮೇರಿಕ ಪಡೆಗಳ ನಿರ್ಗಮನವನ್ನು ಸಂಭ್ರಮಿಸಿದ್ದರು. ಅಮೇರಿಕ ಹಾಗು ಅಫ್ಘಾನ್ ಪಡೆಗಳ ಕೆಲ ಮಾನವ ಹಕ್ಕುಗಳ ಉಲ್ಲಂಘನೆಯು ಇದಕ್ಕೆ ಕಾರಣವಾಗಿರಬಹುದು. ಆದರೆ ಅಫ್ಘಾನ್ ಪಡೆಗಳನ್ನು ಓಡಿಸುವ ಉನ್ಮಾದದಲ್ಲಿ ತಾವು ಯಾರನ್ನು ಆಹ್ವಾನಿಸುತ್ತಿದ್ದೇವೆ ಅನ್ನುವ ಬಗ್ಗೆ ಕುರುಡಾಗಿಬಿಟ್ಟರು.

ಕಂದಹಾರ್ ಪ್ರಾಂತ್ಯದಲ್ಲಿ ಆಗಿನ ಅಫ್ಘಾನ್ ಸೇನೆಯ ಜನರಲ್ ರಾಜಿಕ್ ನಡೆಸುತ್ತಿದ್ದ ಎನ್ನಲಾದ ಮಾನವ ಹಕ್ಕು ಉಲ್ಲಂಘನೆ ಅಲ್ಲಿನ ಜನರನ್ನು ಕ್ರುದ್ಧರನ್ನಾಗಿಸಿತ್ತು. ಸ್ಥಳೀಯರ ಪರೋಕ್ಷ ಬೆಂಬಲ ಪಡೆದ ತಾಲಿಬಾನ್ ಕಂದಹಾರ್ ಅನ್ನು ವಶಪಡಿಸಿಕೊಂಡ ಬಳಿಕ ಅಲ್ಲಿನ ಜನರು ಸಿಹಿತಿಂಡಿ ಹಂಚಿ ಸಂಭ್ರಮ ಪಟ್ಟರು. ಆಗ ಅವರಿಗೂ ಗೊತ್ತಿರಲಿಲ್ಲ, ನೈಜ್ಯ ಮಾನವ ಹಕ್ಕು ಉಲ್ಲಂಘನೆ ಅಂದರೇನು ಅನ್ನುವುದು ಇನ್ನು ಕೆಲ ದಿನಗಳಲ್ಲಿ ತಿಳಿಯಲಿದೆ ಅನ್ನುವ ಸತ್ಯ. ಆಕ್ರಮಣಕ್ಕೂ ಮೊದಲು ತಾಲಿಬಾನಿಗಳು ಆಯಾ ಪ್ರದೇಶಗಳ ಸ್ಥಳೀಯ ನಾಯಕರುಗಳ ವಿಶ್ವಾಸವನ್ನು ಗಳಿಸಿಕೊಂಡು ಆಮೇಲೆ ಆಕ್ರಮಣ ನಡೆಸುತ್ತಿದ್ದರು. ತಾಲಿಬಾನ್ ಅಂತಹ ಒಂದೊಂದೇ ಪ್ರದೇಶಗಳನ್ನು ವಶಪಡಿಸಿಕೊಂಡು ಬರುತ್ತಿದ್ದಂತೆ ತಾಲಿಬಾನ್ ಬಗ್ಗೆ ಒಲವಿಲ್ಲದ ಪ್ರದೇಶಗಳ ಜನರೂ ಕೂಡ ಏನೂ ಮಾಡದಂತಾದರು. ಒಂದು ರೀತಿಯ ಅವ್ಯಕ್ತ ಭಯ ಅಫ್ಘಾನಿಸ್ತಾನದಲ್ಲಿ ಹರಡೋಕೆ ಆರಂಭವಾಯಿತು.

ಮತ್ತೊಂದೆಡೆ ಅಫ್ಘಾನ್ ಸೈನ್ಯಕ್ಕೆ ಸಹಾಯವಾಗಲು ತರಬೇತಿ ಪಡೆದಿದ್ದ ಸಾರ್ವಜನಿಕ ರಕ್ಷಣಾ ಪಡೆಗಳು ಹಾಗು ಸ್ವತಃ ಅಫ್ಘಾನ್ ಸೈನ್ಯದ ಕೆಲವೊಂದು ಬೆಟಾಲಿಯನ್ ಗಳು ತಾಲಿಬಾನಿಗಳಿಗೆ ಯುದ್ಧ ಮಾಡದೆಯೇ ಶರಣಾದವು. ಅವರಲ್ಲಿ ಹೆಚ್ಚಿನವರು ಶಸ್ತ್ರಾಸ್ತ್ರಗಳೊಡನೆ ತಾಲಿಬಾನಿಗೆ ಸೇರಿಕೊಂಡರು. ಹೀಗೆ ತನ್ನ ಸಂಖ್ಯೆ ಹೆಚ್ಚಿಸುತ್ತ ಸಾಗಿದ ತಾಲಿಬಾನ್ ಕಾಬೂಲ್’ವರೆಗೆ ಅನಾಯಾಸವಾಗಿ ಸಾಗುತ್ತಾ ಬಂತು.

ಅಫ್ಘಾನ್ ಸಚಿವಾಲಯದ ಸಾಲು ಸಾಲು ಸುಳ್ಳುಗಳು :
ವಿಶ್ವದ ಬೇರೆ ರಾಷ್ಟ್ರಗಳು ಅಫ್ಘಾನ್ ಪತನವನ್ನು ಊಹಿಸದೇ ಇದ್ದುದ್ದಕ್ಕೆ ಪ್ರಮುಖವಾದ ಕಾರಣ ಒಂದಿದೆ. ಅದುವೇ ಅಫ್ಘಾನ್ ರಕ್ಷಣಾ ಸಚಿವಾಲಯ, ಗುಪ್ತಚರ ಇಲಾಖೆಗಳು ಹೊರಡಿಸುತ್ತಿದ್ದ ಸುಳ್ಳು ಹೇಳಿಕೆಗಳು. ಇದೇ ಆಗಸ್ಟ್ ತಿಂಗಳ ಆರಂಭದಲ್ಲಿ ಒಂದೇ ಪ್ರದೇಶದಲ್ಲಿ ತಾಲಿಬಾನಿಗೆ ಸೇರಿದ 200 ಮಂದಿ ಉಗ್ರರನ್ನು ಹೊಡೆದುರುಳಿಸಿದ್ದಾಗಿ ಅಫ್ಘಾನ್ ವಕ್ತಾರರು ಹೇಳಿಕೆ ನೀಡಿದ್ದರು. ಆದರೆ ಅದಕ್ಕೆ ಯಾವುದೇ ಪುರಾವೆ ಕೊಟ್ಟಿರಲಿಲ್ಲ. ಈ ವರ್ಷದ ಆರಂಭದಲ್ಲಿ ತಾಲಿಬಾನ್ ಕಮಾಂಡರ್ ಅಬ್ದುಲ್ ಹಮೀದ್ ಹಮಾಸಿಯನ್ನು ಕೊಂದಿರುವುದಾಗಿ ಅಫ್ಘಾನ್ ಹೇಳಿಕೊಂಡಿತ್ತು. ಆದರೆ ಅದೇ ಸತ್ತ ವ್ಯಕ್ತಿ ಇಂದು ಅಫ್ಘಾನಿಸ್ತಾನದ ಕಾಬೂಲಿನಲ್ಲಿ ತಾಲಿಬಾನ್ ಪರ ಸರಣಿ ಸಭೆಗಳನ್ನು ನಡೆಸುತ್ತಿದ್ದಾನೆ!! ತಾಲಿಬಾನ್ ಕಾಬೂಲ್ ಪ್ರವೇಶಿಸಿ ಅಫ್ಘಾನ್ ಅಧ್ಯಕ್ಷ ಓಡಿ ಹೋಗುವವರೆಗೂ ಅಫ್ಘಾನ್ ಸೇನೆ ತಾಲಿಬಾನ್ ಅನ್ನು ಹೆಡೆಮುರಿ ಕಟ್ಟುತ್ತಿದೆ ಎಂದೇ ಅಂತರರಾಷ್ಟ್ರೀಯ ಸಮಾಜ ಭಾವಿಸುತ್ತಿತ್ತು.

ಭಾರತದ ಹೂಡಿಕೆ ಮತ್ತು ವ್ಯಾಪಾರ ಸಂಬಂಧಗಳು :
ಭಾರತ ಅಫ್ಘಾನಿಸ್ತಾನದಲ್ಲಿ ಒಟ್ಟು 400ಕ್ಕೂ ಅಧಿಕ ಪ್ರಾಜೆಕ್ಟ್ ಗಳಲ್ಲಿ ಹೂಡಿಕೆ ಮಾಡಿದೆ. ರಸ್ತೆಗಳು, ಅಣೆಕಟ್ಟುಗಳು, ಸೇತುವೆಗಳು, ಶಾಲೆಗಳು, ಗ್ರಂಥಾಲಯಗಳಿಂದ ಹಿಡಿದು ಅಲ್ಲಿನ ಪಾರ್ಲಿಮೆಂಟ್’ವರೆಗೆ ಭಾರತ ನಿರ್ಮಿಸಿಕೊಟ್ಟಿದೆ. ಈಗ ಅವೆಲ್ಲವುಗಳ ಭವಿಷ್ಯ ಭಾರತ ತಾಲಿಬಾನ್ ನಡುವಿನ ಮಾತುಕತೆಯ ಮೇಲೆ ನಿಂತಿದೆ. ಮೂಲಗಳ ಪ್ರಕಾರ ಈಗಾಗಲೇ ಈ ಮಾತುಕತೆ ಪ್ರಕ್ರಿಯೆ ಅಮೇರಿಕವು ತನ್ನ ಸೇನೆಯನ್ನು ವಾಪಸು ಕರೆಸಿಕೊಳ್ಳುತ್ತೇವೆ ಎಂದು ಘೋಷಿಸಿದ ಕೆಲ ದಿನಗಳಲ್ಲಿಯೇ ತೆರೆಯ ಹಿಂದೆ ನಡೆದು ಹೋಗಿದೆ ಎನ್ನಲಾಗಿದೆ. ಬಹುಶಃ ತಾಲಿಬಾನ್ ವಕ್ತಾರರು ಭಾರತದ ವಿಷಯಕ್ಕೆ ಹೋಗುವುದಿಲ್ಲ ಅಂದಿದ್ದು ಇದೇ ಹಿನ್ನಲೆಯಲ್ಲಿರಬೇಕು. ಜತೆಗೆ ಅಭಿವೃದ್ಧಿ ಕೆಲಸಗಳ ಮೇಲೆ ವಕ್ರ ದೃಷ್ಟಿ ಬೀರಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೇಲೆ ಧಾಳಿ ಮಾಡಲು ತಾವೇ ದಾರಿ ಮಾಡಿಕೊಟ್ಟಂತಾಗುತ್ತದೆ ಅನ್ನುವ ಭಯವೂ ತಾಲಿಬಾನ್ ಉಗ್ರರಿಗೆ ಇದ್ದಂತಿದೆ. ಹಾಗಾಗಿ ಸದ್ಯದ ಮಟ್ಟಿಗೆ ಭಾರತದ ಹೂಡಿಕೆಗಳು ಸುರಕ್ಷಿತ ಎಂದೇ ಹೇಳಬಹುದು.

ತನ್ನ ನಿರ್ಮಾಣಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಭಾರತ ತಾಲಿಬಾನಿನೊಂದಿಗೆ ಮಾತುಕತೆ ನಡೆಸಿದರೂ ತಾಲಿಬಾನ್ ಆಡಳಿತವನ್ನು ಮಾತ್ರ ಖಂಡಿತ ಒಪ್ಪಿಕೊಳ್ಳುವುದಿಲ್ಲ. ಒಂದು ಭಯೋತ್ಪಾದಕ ಸಂಘಟನೆ ಒಂದು ದೇಶದ ಆಡಳಿತ ಚುಕ್ಕಾಣಿ ಹಿಡಿಯುವುದನ್ನು ಭಾರತ ಸಹಿಸುವುದೂ ಇಲ್ಲ. ತಾಲಿಬಾನ್ ಆಕ್ರಮಣದ ನಂತರ ವಿಶ್ವದ ಹೆಚ್ಚಿನ ದೇಶಗಳು ಪರ ವಿರೋಧ ಪ್ರತಿಕ್ರಿಯೆ ನೀಡಿದರೂ ಭಾರತ ಮಾತ್ರ ಸುಮ್ಮನಿತ್ತು. ಬಹುಶಃ ಈ ಒಂದು ಅಂಶ ಭಾರತ ಅಫ್ಘಾನ್ ಮಧ್ಯೆ ಆಮದು ರಫ್ತು ವ್ಯವಹಾರಕ್ಕೆ ತಡೆಯಾಗಿ ಪರಿಣಮಿಸಬಹುದು. ಆದರೆ ಎಲ್ಲಿಯವರೆಗೆ ಅನ್ನುವುದು ಅನಿಶ್ಚಿತ. ಹಣಕಾಸು ವರ್ಷ 2019-20ರ ವೇಳೆಗೆ, ಎರಡು ರಾಷ್ಟ್ರಗಳ ನಡುವಿನ ವ್ಯಾಪಾರವು 1.5 ಬಿಲಿಯನ್‌ ಡಾಲರ್ ಗಿಂತಲೂ ಹೆಚ್ಚಿತ್ತು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬಹುಪಾಲು ಡ್ರೈ ಫ್ರೂಟ್ಸ್, ಕಾರ್ಪೆಟ್ಸ್, ಉಣ್ಣೆ ಮತ್ತು ತರಕಾರಿ ಉತ್ಪನ್ನಗಳು ಸೇರಿವೆ.

ಇದೀಗ ತಾಲಿಬಾನ್ ಪಾಕಿಸ್ತಾನದೊಂದಿಗಿನ ಗಡಿಗಳಾದ ಟೋರ್ಖಾಮ್ ಮತ್ತು ಚಮನ್ ಮೇಲೆ ಹಿಡಿತ ಸಾಧಿಸಿ ಅವೆರಡನ್ನೂ ಮುಚ್ಚಿದೆ. ಇದು ಭಾರತ ಹಾಗು ಅಫ್ಘಾನಿಸ್ತಾನ ನಡುವಿನ ವ್ಯಾಪಾರ ಚಟುವಟಿಕೆಗಳಿಗೆ ಬಳಸುವ ಏಕೈಕ ಭೂ ಮಾರ್ಗವಾಗಿದೆ. ಇಲ್ಲಿಯವರೆಗೆ ಅಫ್ಘಾನಿನಿಂದ ಭಾರತಕ್ಕೆ ಡ್ರೈ ಫ್ರೂಟ್ಸ್ ಭೂ ಮಾರ್ಗವಾಗಿಯೇ ಬರುತ್ತಿತ್ತು. ಡ್ರೈ ಫ್ರೂಟ್ ಸಾಗಾಟಕ್ಕೆ ಸಮುದ್ರ ಅಥವಾ ವಾಯುಮಾರ್ಗದ ವ್ಯವಸ್ಥೆ ಮಾಡಿಕೊಂಡಿಲ್ಲ. ಈಗ ಆಗಿರುವ ವ್ಯಾಪಾರ ಸ್ಥಗಿತವು ಎರಡೂ ದೇಶಗಳಿಗೆ ನಷ್ಟವುಂಟುಮಾಡಲಿದೆ. ಅದರಲ್ಲೂ ಭಾರತವು ಅಫ್ಘಾನಿಸ್ತಾನದ ಸರಕುಗಳಿಗೆ ಅತೀ ದೊಡ್ಡ ಮಾರುಕಟ್ಟೆಯಾಗಿದ್ದು, 2019ರ ಹೊತ್ತಿಗೆ ಭಾರತಕ್ಕೆ ಅಫ್ಘಾನ್ ವಸ್ತುಗಳ ಒಟ್ಟು ರಫ್ತು ಮೌಲ್ಯವು 410 ಮಿಲಿಯನ್ ಡಾಲರ್ ಆಗಿತ್ತು. ಇದು 2020-21 ವರ್ಷದಲ್ಲಿ 500 ದಶಲಕ್ಷ ಡಾಲರಿಗೆ ಏರಿತ್ತು.

ದೇಶ ಆಳಲು ತಾಲಿಬಾನಿಗಳ ಕೈಯಲ್ಲಿ ಬಂದೂಕುಗಳೇನೋ ಇವೆ. ಆದರೆ ಅಷ್ಟು ದೊಡ್ಡ ದೇಶ ನಡೆಸಲು ಬೇಕಾಗುವ ಸಂಪನ್ಮೂಲಕ್ಕೆ ಎಷ್ಟು ದಿನ ಎಂದು ರಷ್ಯಾ ಚೀನಾದಂತಹ ತನ್ನ ಬೆಂಬಲಿಗ ರಾಷ್ಟ್ರಗಳೆದುರು ಕೈ ಚಾಚಲಿದೆ?. ಒಂದಲ್ಲ ಒಂದು ದಿನ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ತೆರೆದುಕೊಳ್ಳಲೇಬೇಕು. ಆಗ ತನ್ನ ಅತೀ ದೊಡ್ಡ ಮಾರುಕಟ್ಟೆ ಭಾರತದ ಬಳಿ ಬರಲೇಬೇಕು. ಗುಜರಾತಿನ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಅಧ್ಯಯನ ಸಂಸ್ಥೆಯ ಡೈರೆಕ್ಟರ್ ಶಕ್ತಿ ಸಿನ್ಹಾರವರು ಹೇಳುವ ಪ್ರಕಾರ, “ಭಾರತವು ಅಫ್ಘಾನ್ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸುವುದರಲ್ಲಿ ಚುರುಕಾಗಬೇಕು. ಇತಿಹಾಸವನ್ನು ಗಮನಿಸಿದರೆ ಕಾಬೂಲ್ ಅನ್ನು ಆಳುವ ಪ್ರತಿಯೊಬ್ಬರಿಗೂ ರಾಜಕೀಯ ಹಾಗು ಆರ್ಥಿಕ ಕಾರಣಗಳಿಗಾಗಿ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವ ಇಚ್ಛೆ ಬಂದೇ ಬರುತ್ತದೆ.”

ಅಮೇರಿಕಾದ ಒಬಾಮ ಹಾಗು ಈಗಿನ ಜೋ ಬಿಡೆನ್ ಸರಕಾರಗಳ ಮೂರ್ಖ ನಿರ್ಧಾರಗಳಿಂದಾಗಿ ತಾಲಿಬಾನಿನಂತಹ ಉಗ್ರ ಶಕ್ತಿಗಳು ಮತ್ತೆ ಮೆರೆಯುವಂತಾಗಿದೆ. ಒಂದು ದೇಶದ ಮೂರ್ಖ ನಿರ್ಧಾರದ ಪರಿಣಾಮವನ್ನು ಮಾತ್ರ ವಿಶ್ವದ ಹೆಚ್ಚಿನ ದೇಶಗಳು ಅನುಭವಿಸುವಂತಾಗಿದೆ. ಒಂದು ಕಡೆ ಕುಟಿಲ ಚೀನಾ ತಾಲಿಬಾನಿಗಳೊಂದಿಗೆ ಸ್ನೇಹ ಸಂಬಂಧಕ್ಕೆ ಹಾತೊರೆಯುತ್ತಿದ್ದರೆ, ಪಕ್ಕದಲ್ಲಿ ಪಾಕಿಸ್ತಾನ ಚೀನಾ-ತಾಲಿಬಾನ್ ಮಧ್ಯೆ ವ್ಯವಹಾರ ಕುದುರಿಸುತ್ತಿದೆ. ಉಗ್ರರು ಯಾರು, ಹೋರಾಟಗಾರರು ಯಾರು ಎನ್ನುವ ಬಗ್ಗೆ ದ್ವಂಧ್ವ ಹುಟ್ಟಿಕೊಂಡಿದೆ. ಕೆಲ ದೇಶಗಳು ತಾಲಿಬಾನ್ ಪರ ಹೇಳಿಕೆ ನೀಡುವ ಮೂಲಕ ಭಯೋತ್ಪಾದಕರ ಕುರಿತಾದ ವ್ಯಾಖ್ಯಾನವನ್ನೇ ಅನುಮಾನದಿಂದ ನೋಡುವಂತಾಗಿದೆ. ಒಟ್ಟಾರೆ ಬೆಳವಣಿಗೆ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಭದ್ರತಾ ಕಾರಣಗಳಿಗಾಗಿ ಭಾರತಕ್ಕೆ ಮುಳ್ಳಾಗಿರುವುದಂತೂ ಸತ್ಯ. ಆದರೂ ಎಲ್ಲದಕ್ಕೂ ಒಂದು ಅಂತ್ಯವಿದ್ದೇ ಇರುತ್ತದೆ. ಅಲ್ಲಿಯವರೆಗೆ ಕಾಯಬೇಕು.

– ಲೇಖಕರು : ಅಶ್ವಿನ್ ಲಕ್ಷ್ಮೀಶ (ಹವ್ಯಾಸಿ ಬರಹಗಾರರು – ರಾಜಕೀಯ, ಇತಿಹಾಸ ಮತ್ತು ಅಂತರರಾಷ್ಟ್ರೀಯ ವಿಚಾರಗಳು)

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments