Articles

ಮಲಬಾರ್ ಸಮರಾಭ್ಯಾಸ ಮತ್ತು ಭಾರತೀಯ ನೌಕಾಪಡೆಯ ಪರಾಕ್ರಮ

ಕೊರೊನದ ಎರಡನೆಯ ಅಲೆ ತಗ್ಗಿದೆ, ಭಾರತೀಯರು ನಿಟ್ಟುಸಿರು ಬಿಡುತ್ತಿದ್ದಾರೆ, ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದ್ದರೆ, ಇತ್ತ ಭಾರತದ ಯುದ್ಧ ನೌಕೆಗಳಾದ ಐ.ನ್.ಎಸ್ ಶಿವಾಲಿಕ್ ಹಾಗು ಐ.ನ್.ಎಸ್ ಖದಮತ್ ಫೆಸಿಫಿಕ್ ಸಾಗರದಲ್ಲಿರುವ ಗೌಮ್ ದ್ವೀಪದ ಕಡೆ ಕೆಲದಿನಗಳ ಹಿಂದೆ ಶರವೇಗದಲ್ಲಿ ಧಾವಿಸುತ್ತಿದ್ದವು.

ಗೌಮ್ ದ್ವೀಪ ಅಮೆರಿಕಾದ ಒಂದು ಭಾಗ. ಇಲ್ಲಿಯೇ ಭಾರತ, ಅಮೇರಿಕ, ಜಪಾನ್ ಹಾಗು ಆಸ್ಟ್ರೇಲಿಯಾ ನೌಕಾಪಡೆಗಳು ಸೇರಿ ಸಮರಾಭ್ಯಾಸವನ್ನು ನಡೆಸುತ್ತಿವೆ. ಈ ಸಮರಾಭ್ಯಾಸವೇ ‘ಮಲಬಾರ್’.

ಮಲಬಾರ್ ಸಮರಾಭ್ಯಾಸ ಪ್ರಾರಂಭವಾಗಿದ್ದು 1992ರಲ್ಲಿ. ಭಾರತ ಹಾಗು ಅಮೆರಿಕಗಳು ಇದನ್ನು ದ್ವಿಪಕ್ಷೀಯ ಸಮರಾಭ್ಯಾಸವಾಗಿ ಆರಂಭಿಸಿದವು. 1995 ಹಾಗು 1996 ರಲ್ಲೂ ಇದೇ ಸಮರಾಭ್ಯಾಸ ನಡೆಯಿತು. ಆದರೆ 1998ರಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಿದ ಕಾರಣಕ್ಕೆ 2002ರವರೆಗೆ ಈ ಸಮರಾಭ್ಯಾಸ ನಡೆಯಲೇ ಇಲ್ಲ. 2002ರಿಂದ ಮಲಬಾರ್ ಸಮರಾಭ್ಯಾಸ ಮತ್ತೆ ಆರಂಭವಾಗಿ, 2007ರಲ್ಲಿ ಇದರಲ್ಲಿ 4 ದೇಶಗಳು ಭಾಗಿಯಾದವು. ಭಾರತ, ಅಮೆರಿಕಗಳೊಡನೆ ಜಪಾನ್ ಹಾಗು ಆಸ್ಟ್ರೇಲಿಯಾ ದೇಶಗಳು ಸೇರಿಕೊಂಡು ಕ್ವಾಡ್ ದೇಶಗಳೆನಿಸಿಕೊಂಡವು. ಹೀಗೆ ಮುಂದುವರೆದು ಮಲಬಾರ್ ಸಮರಾಭ್ಯಾಸದಲ್ಲಿ ಭಾರತ ಅಮೇರಿಕ ದೇಶಗಳು ಮಾತ್ರ ಭಾಗವಹಿಸುತ್ತಿದ್ದವು. 2015ರಲ್ಲಿ ಜಪಾನ್ ಮತ್ತೆ ಸಮರಾಭ್ಯಾಸಕ್ಕೆ ಸೇರಿಕೊಂಡಿತು. ಹೀಗಾಗಿ ಇದು 2015ರಿಂದ ತ್ರಿಪಕ್ಷೀಯ ಸಮರಾಭ್ಯಾಸವಾಗಿ ಬದಲಾಯಿತು. ಆಸ್ಟ್ರೇಲಿಯಾ ಆಗಲೇ ಸೇರಿಕೊಳ್ಳಲು ಮುಂದೆ ಬಂತಾದರೂ, ಚೀನಾಗೆ ಇರಿಸುಮುರಿಸು ಆಗಬಹುದು ಎಂಬ ಕಾರಣಕ್ಕೆ ಆಸ್ಟ್ರೇಲಿಯಾ ಭಾಗವಹಿಸುವಿಕೆಗೆ ಭಾರತ ಸಹಮತಿಸಲಿಲ್ಲ. ಆದರೆ ಕೋವಿಡ್ ಸಂದರ್ಭದಲ್ಲಿ ಭಾರತ ಸಾಂಕ್ರಾಮಿಕದೊಡನೆ ಸೆಣಸುತ್ತಿರುವಾಗ ಚೀನಾದ ಸೇನೆ ಉತ್ತರದ ಗಡಿಯಲ್ಲಿ ವರ್ತಿಸಿದ ರೀತಿ ಭಾರತ ತನ್ನ ನೀತಿಯನ್ನೇ ಬದಲಿಸಿಕೊಳ್ಳಲು ಕಾರಣವಾಯಿತು. ಹೀಗಾಗಿ 2020ರ ಮಲಬಾರ್ ಆವೃತ್ತಿಯಲ್ಲಿ ಕ್ವಾಡ್’ನ ನಾಲ್ಕೂ ದೇಶಗಳೂ ಭಾಗವಹಿಸಿದವು.

ಈ ವರ್ಷದ ‘ಮಲಬಾರ್’ನ ಆವೃತ್ತಿಯು ಫೆಸಿಫಿಕ್ ಸಾಗರದ ಗೌಮ್ ದ್ವೀಪದ ಬಳಿ ಪ್ರಾರಂಭವಾಗಿದೆ. ಭಾರತ, ಅಮೇರಿಕ, ಜಪಾನ್ ಹಾಗು ಆಸ್ಟ್ರೇಲಿಯಾಗಳು ಜತೆಯಾಗಿ ಇದರಲ್ಲಿ ಪಾಲ್ಗೊಳ್ಳುತ್ತಿದ್ದು, ಚೀನಾಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಇದು ‘ಮಲಬಾರ್’ನ 25ನೇ ಆವೃತ್ತಿ ಎಂಬುದು ವಿಶೇಷ.

ಭಾರತ ತನ್ನ ನೌಕಾ ಪಡೆಯ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ದೃಢವಾದ ಹೆಜ್ಜೆಗಳನ್ನು ಇಡುತ್ತಾ ಬರುತ್ತಿದೆ. ಮಲಬಾರ್ ಸಮರಾಭ್ಯಾಸ ಅದರ ಒಂದು ಭಾಗ. ಭಾರತದ ಮೊದಲ ದೇಶೀ ನಿರ್ಮಿತ ವಿಮಾನ ವಾಹಕ ನೌಕೆ INS ವಿಕ್ರಾಂತ್ ಈಗ ಪರೀಕ್ಷಾರ್ಥ ಸಂಚಾರ ಆರಂಭಿಸಿದೆ. ಹೀಗಾಗಿ ಭಾರತದ ಒಟ್ಟು ವಿಮಾನವಾಹಕ ಯುದ್ಧ ಸಂಖ್ಯೆ ಎರಡಕ್ಕೆ ಏರಿದೆ. INS ವಿಕ್ರಾಂತ್ ಅನ್ನು ಕೊಚ್ಚಿಯ ಕಟ್ಟೆಯಲ್ಲಿ ನಿರ್ಮಿಸಲಾಯಿತು. ಹಿಂದೂಮಹಾಸಾಗರದಾದ್ಯಂತ ತನ್ನ ಪಾರಮ್ಯವನ್ನು ಮೆರೆಯಲು, ಎರಡನೆಯ ವಿಮಾನ ವಾಹಕ ನೌಕೆ ಭಾರತಕ್ಕೆ ಅವಶ್ಯಕವಾಗಿತ್ತು. ಹಾಗಾಗಿ INS ವಿಕ್ರಾಂತ್ ಸೇರ್ಪಡೆ ಒಂದು ಮೈಲಿಗಲ್ಲು ಎನ್ನಬಹುದು. ನೌಕಾಪಡೆ ಈಗ ಮೂರನೆಯ ವಿಮಾನವಾಹಕ ಯುದ್ಧ ನೌಕೆಯನ್ನು ಹೊಂದಲು ಬಯಸುತ್ತಿದೆ. ಮೂರನೆಯ ವಿಮಾನವಾಹಕ ನೌಕೆಯ ಬಗ್ಗೆ ರಕ್ಷಣಾ ತಜ್ಞರಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ಅನೇಕ ತಜ್ಞರು ಮೂರನೆಯ ವಿಮಾನ ವಾಹಕ ನೌಕೆಗಿಂತ ಸಬ್ ಮರಿನ್’ಗಳನ್ನು ಹೊಂದುವುದೇ ಉತ್ತಮ ಎಂದು ಹೇಳುತ್ತಾರೆ.

ಕಾರ್ಗಿಲ್ ಸಮಯದಲ್ಲಿ ಭಾರತೀಯ ನೌಕಾಪಡೆ ಸಾಮರ್ಥ್ಯ ನಿರ್ಣಾಯಕವಾಗಿತ್ತು. ಅರಬ್ಬೀ ಸಮುದ್ರದಲ್ಲಿ ಬಿಗಿಯಾದ ಪಹರೆಯನ್ನು ರಚಿಸಿದ ಭಾರತದ ನೌಕಾಪಡೆ ಪಾಕಿಸ್ತಾನಕ್ಕೆ ತೈಲ ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿತ್ತು. ಪರಿಣಾಮ ಪಾಕಿಸ್ತಾನಕ್ಕೆ ಕೇವಲ ಹತ್ತು ದಿನಗಳಿಗೆ ಆಗುವಷ್ಟು ತೈಲ ಬಾಕಿಯಿತ್ತು. ಹೀಗಾಗಿ ಯುದ್ಧದಿಂದ ಹಿಂದೆ ಸರಿಯದೆ ಪಾಕಿಸ್ತಾನಕ್ಕೆ ಬೇರೆ ದಾರಿಯೇ ಇರಲಿಲ್ಲ ಎಂಬುದನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇದು ನೌಕಾಪಡೆಯೊಂದು ಹೇಗೆ ಯುದ್ಧದ ದಿಕ್ಕನ್ನೇ ಬದಲಿಸಬಲ್ಲದು ಎಂಬುದಕ್ಕೆ ಸಾಕ್ಷಿ.

– ವಿನಾಯಕ ಗಾಂವಕರ

Exit mobile version