Coastal

ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರಕ್ಕೆ ಹುಟ್ಟೂರ ನಮನ

ಉಡುಪಿ: ನಿನ್ನೆ (ಸೋಮವಾರ) ನಿಧನರಾದ ಕಾಂಗ್ರೆಸ್ ರಾಷ್ಟೀಯ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಇಂದು ಮಂಗಳೂರಿನಿಂದ ಉಡುಪಿಗೆ ಅಂಬ್ಯುಲೆನ್ಸ್ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ದಾರಿಯುದ್ದಕ್ಕೂ ಪಕ್ಷದ ಕಾರ್ಯಕರ್ತರು ಹಾಗು ಅಭಿಮಾನಿಗಳು ನೆರೆದು ಪುಷ್ಪಾರ್ಚನೆ ಮಾಡುವ ಮೂಲಕ ಕರಾವಳಿಯ ನಾಯಕನಿಗೆ ಗೌರವ ಸಲ್ಲಿಸಿದರು.

ಬೆಳಗ್ಗೆ ಸುಮಾರು 9:45ರ ಸುಮಾರಿಗೆ ಉಡುಪಿಯ ಶೋಕಮಾತಾ ಇಗರ್ಜಿಗೆ ಆಸ್ಕರ್ ಅವರ ಪಾರ್ಥಿವ ಶರೀರವನ್ನು ತರಲಾಯಿತು. ಅಲ್ಲಿ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು. ಅಲ್ಲಿ ಕೆಲ ಗಣ್ಯರು ಅಂತಿಮ ನಮನ ಸಲ್ಲಿಸಿದರು. ನಂತರ ಪಾರ್ಥಿವ ಶರೀರವನ್ನು ಆಸ್ಕರ್ ಅವರ ಸ್ವಗೃಹಕ್ಕೆ ತರಲಾಯಿತು. ಅಲ್ಲಿ ಕುಟುಂಬಸ್ಥರಿಗೆ ಅಂತಿಮ ನಮನಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕೊಡಲಾಯಿತು. ಉಡುಪಿ, ದಕ್ಷಿಣ ಕಾನಂದ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ನೆರೆಹೊರೆಯ ಜಿಲ್ಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಬಂದು ತಮ್ಮ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅದಕ್ಕೂ ಮೊದಲು ಮಂಗಳೂರಿಂದ ಪಾರ್ಥಿವ ಶರೀರದೊಡನೆ ಹೊರಟ ಅಂಬ್ಯುಲೆನ್ಸ್ ಸಂಚಾರಕ್ಕೆ ಸುಗಮವಾಗಲು ಪೊಲೀಸ್ ಇಲಾಖೆ ಮಂಗಳೂರಿನಿಂದ ಉಡುಪಿವರೆಗೆ ಅಲ್ಲಲ್ಲಿ ಗಸ್ತು ನಿಂತು ಸಹಕರಿಸಿತು. ಉಡುಪಿಯಲ್ಲಿ ಅಂತಿಮ ನಮನಕ್ಕೆ ಅವಕಾಶ ಕೊಟ್ಟ ಬಳಿಕ ಮತ್ತೆ ಪಾರ್ಥಿವ ಶರೀರವನ್ನು ಮಂಗಳೂರಿಗೆ ತಂದು ಪಕ್ಷದ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು.

ಜಿಲ್ಲಾಧಿಕಾರಿ ಕೂರ್ಮ ರಾವ್, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಧ್ರುವನಾರಾಯಣ, ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಯುಟಿ ಖಾದರ್, ರಮಾನಾಥ ರೈ, ಅಭಯಚಂದ್ರ ಜೈನ್, ಮೊಯಿದೀನ್ ಬಾವಾ, ಜೆಆರ್ ಲೋಬೊ, ಐವನ್ ಡಿಸೋಜ, ಪ್ರತಾಪ್ ಚಂದ್ರ ಶೆಟ್ಟಿ ಸೇರಿದಂತೆ ಹಲವರು ಶದ್ಧಾಂಜಲಿ ಅರ್ಪಿಸಿದರು.

ಸೆಪ್ಟೆಂಬರ್ 16ರ ಗುರುವಾರ ಆಸ್ಕರ್ ಪಾರ್ಥಿವ ಶರೀರವನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ದರ್ಶನಕ್ಕೆ ಇಡಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದರು. ಈ ಸಂದರ್ಭ ರಾಷ್ಟ್ರೀಯ ನಾಯಕರು ಆಗಮಿಸಿ ಗೌರವ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದರು.

Exit mobile version