Political

ಕಲ್ಬುರ್ಗಿ ಪಾಲಿಕೆ ಅಧಿಕಾರ: ಬೆಂಬಲ ಬಿಜೆಪಿಗೋ ಕಾಂಗ್ರೆಸ್ಸಿಗೋ ಎಂಬ ಗೊಂದಲದಲ್ಲಿ ಜೆಡಿಎಸ್ ಇಬ್ಭಾಗ

ಬೆಂಗಳೂರು: ಇಂದು ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಲಬುರ್ಗಿ ಪಾಲಿಕೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬ ನಿರ್ಧಾರಕ್ಕೆ ಬರಲಾಗದೆ ಗೊಂದಲದಿಂದ ಸಭೆ ಮುಕ್ತಾಯಗೊಂಡಿದೆ. ಮುಂದಿನ ನಿರ್ಧಾರವನ್ನು ಪಕ್ಷದ ಪರಮೋಚ್ಚ ನಾಯಕ ಎಚ್.ಡಿ ದೇವೇಗೌಡ ಹಾಗು ಕುಮಾರಸ್ವಾಮಿಯವರು ತೆಗೆದುಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಕೆಲವು ಶಾಸಕರು ಕಲಬುರ್ಗಿ ಪಾಲಿಕೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಸೂಚಿಸಿದರೆ, ಮತ್ತೆ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಏರಲು ನೆರವಾಗಬೇಕು ಎಂದು ಹೇಳಿದರು. ಈ ಗೊಂದಲದಿಂದಾಗಿ ಸಭೆಯಲ್ಲಿ ಯಾವುದೇ ಒಂದು ಸ್ಥಿರ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ದೇವೇಗೌಡರು ಹಾಗು ಕುಮಾರಸ್ವಾಮಿಯವರೇ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.

ಕಲಬುರ್ಗಿ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಕಾಂಗ್ರೆಸ್ 27 ಹಾಗು ಬಿಜೆಪಿ 23 ಸ್ಥಾನಗಳನ್ನು ಗಳಿಸಿದೆ. ಜೆಡಿಎಸ್ 4 ಸ್ಥಾನಗಳನ್ನು ಹೊಂದಿದ್ದು ಜೆಡಿಎಸ್ ಬೆಂಬಲ ನಿರ್ಣಾಯಕವಾಗಿದೆ. ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ಬೆಂಬಲಕ್ಕಾಗಿ ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷದ ನಾಯಕರುಗಳು ಜೆಡಿಎಸ್ ಜತೆ ತೆರೆಮರೆಯ ಮಾತುಕತೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಕುದುರೆ ವ್ಯಾಪಾರದ ಭಯದಿಂದ ಜೆಡಿಎಸ್ ಈಗಾಗಲೇ ತನ್ನ ಕಾರ್ಪೊರೇಟರ್’ಗಳನ್ನು ಅಜ್ಞಾತ ಸ್ಥಳದಲ್ಲಿ ಇರಿಸಿದೆ. ಒಬ್ಬೊಬ್ಬರಿಗೆ ಒಂದು ಕೋಟಿ ಆಮಿಷ ಒಡ್ಡಲಾಗಿದೆ ಎಂಬ ಮಾತು ಕೂಡ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

Exit mobile version