
ಬೆಂಗಳೂರು: ಐಟಿಐಗೆ ೬ ಹೊಸ ಕೋರ್ಸುಗಳ ಸೇರ್ಪಡೆ ಮಾಡಲು ನಿರ್ಧರಿಸಲಾಗಿದ್ದು ಇದಕ್ಕೆ ರಾಜ್ಯ ವೃತ್ತಿ ಶಿಕ್ಷಣ ಪರಿಷತ್ತಿನಿಂದ ಅನುಮೋದನೆ ದೊರಕಿದೆ. ಹೊಸ ಕೋರ್ಸುಗಳಿಗೆ ಈ ವರ್ಷದಿಂದಲೇ ಪ್ರವೇಶಾತಿ ಆರಂಭಿಸಲು ವೃತ್ತಿ ಶಿಕ್ಷಣ ಸಚಿವ ಅಶ್ವಥನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಟಾಟಾ ಕಂಪನಿಯ ಸಹಯೋಗದಲ್ಲಿ ರಾಜ್ಯದ 150 ಐಟಿಐಗಳನ್ನು ಉನ್ನತೀಕರಿಸಲು ಯೋಜನೆ ರೂಪಿಸಲಾಗಿದ್ದು ಅದರ ಅನ್ವಯ ಹೊಸ ಕೋರ್ಸುಗಳನ್ನು ಸೇರಿಸಿಕೊಳ್ಳಲಾಗಿದೆ. ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ತಿನ ಅನುಮತಿ ಇನ್ನಷ್ಟೇ ದೊರೆಯಬೇಕಿದ್ದು ಜತೆಗೆ ಇವುಗಳ ಪಠ್ಯಕ್ರಮಕ್ಕೆ ದೆಹಲಿಯ ಡಿ.ಜಿ.ಟಿ ಯಿಂದ ಅನುಮೋದನೆ ಪಡೆಯಬೇಕಿದೆ. ಪಠ್ಯಕ್ರಮವನ್ನು ಈಗಾಗಲೇ ಡಿ.ಜಿ.ಟಿಗೆ ಸಲ್ಲಿಸಲಾಗಿದೆ.
ಈ ಬಾರಿ ಐಟಿಐ ಸೇರಿಕೊಳ್ಳಲಿರುವ ಆರು ಹೊಸ ಕೋರ್ಸುಗಳು ಯಾವುವು ಎಂದರೆ ; 2 ವರ್ಷದ ಬ್ಯಾಟರಿ ಎಲೆಕ್ಟ್ರಿಕಲ್ ವೆಹಿಕಲ್ ಕೋರ್ಸ್, 2 ವರ್ಷದ ಬೇಸಿಕ್ಸ್ ಆಫ್ ಡಿಸೈನ್ ಆಂಡ್ ವರ್ಚುವಲ್ ವೆರಿಫಿಕೇಷನ್, 1 ವರ್ಷದ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, 1 ವರ್ಷದ ಆರ್ಟಿಸನ್ ಯೂಸಿಂಗ್ ಅಡ್ವಾನ್ಡ್ಸ್ ಟೂಲ್ಸ್, 1 ವರ್ಷದ ಇಂಡಸ್ಟ್ರಿಯಲ್ ರೊಬೊಟಿಕ್ಸ್ ಆಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಹಾಗು 1 ವರ್ಷ ಅವಧಿಯ ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಅಟೋಮೇಷನ್ ಕೋರ್ಸ್. ಇವುಗಳ ಜತೆಗೆ 23 ಕಿರು ಅವಧಿಯ ಕೋರ್ಸುಗಳ ಆರಂಭಕ್ಕೂ ರಾಜ್ಯ ವೃತ್ತಿ ಶಿಕ್ಷಣ ಪರಿಷತ್ ಅನುಮೋದನೆ ನೀಡಿದೆ.