HomeCoastalಸುರತ್ಕಲ್ ಟೋಲ್ ರದ್ದಿನಿಂದ ಹೆಜಮಾಡಿಯಲ್ಲಿ ಕಟ್ಟಬೇಕು ಎರಡು ಪಟ್ಟು ಶುಲ್ಕ: ಡಿ. 1ರಿಂದ ಜಾರಿ, ಗಾಯದ...

ಸುರತ್ಕಲ್ ಟೋಲ್ ರದ್ದಿನಿಂದ ಹೆಜಮಾಡಿಯಲ್ಲಿ ಕಟ್ಟಬೇಕು ಎರಡು ಪಟ್ಟು ಶುಲ್ಕ: ಡಿ. 1ರಿಂದ ಜಾರಿ, ಗಾಯದ ಮೇಲೆ ಬರೆ ಎಳೆದವರಾರು?

ಮಂಗಳೂರು: ಸುರತ್ಕಲ್ ಟೋಲ್ ರದ್ದು ಮಾಡುತ್ತೇವೆ ಎಂದು ಹೇಳಿ ಇದೀಗ ಮಂಗಳೂರ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಹೆಜಮಾಡಿಯಲ್ಲಿ ಟೋಲ್ ಶುಲ್ಕವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಏರಿಸಲಾಗಿದೆ. ಡಿ. 1ರಿಂದ ಅನ್ವಯವಾಗುವಂತೆ ಸುರತ್ಕಲ್‌ ಎನ್‌ಐಟಿಕೆ ಬಳಿಯ ಸುಂಕ ಸಂಗ್ರಹ ಕೇಂದ್ರವು ಹೆಜಮಾಡಿ ಟೋಲ್‌ಗೇಟ್‌ ನೊಂದಿಗೆ ವಿಲೀನಗೊಳ್ಳಲಿದೆ. ಇದರ ಪರಿಣಾಮವಾಗಿ ಹೆಜಮಾಡಿಯಲ್ಲಿ ಸುಂಕ ದುಬಾರಿಯಾಗಲಿದೆ.

ಈ ಮೊದಲು ಸುರತ್ಕಲ್ ಟೋಲ್’ನಲ್ಲಿ ಮಂಗಳೂರು ಕೆಎ 19 ರಿಜಿಸ್ಟರಿನ ವಾಹನಗಳಿಗೆ ಸಿಗುತ್ತಿದ್ದ ವಿನಾಯಿತಿಯೂ ಇರುವುದಿಲ್ಲ. ಸುರತ್ಕಲ್ ಹಾಗು ಹೆಜಮಾಡಿ ಟೋಲ್ ಶುಲ್ಕ ಸೇರಿಸಿ ಆಗುವ ಮೊತ್ತಕ್ಕಿಂತಲೂ ಸ್ವಲ್ಪ ಹೆಚ್ಚೇ ಹೆಜ್ಮಾಡಿಯಲ್ಲಿ ಕಟ್ಟಬೇಕು. ಕಾರು ಮುಂತಾದ ವಾಹನಗಳವರು ಹೆಜ್ಮಾಡಿಯಲ್ಲಿ 100 ರೂ. ಪಾವತಿ ಮಾಡಲೇಬೇಕು. ಆದರೆ ಹೆಜಮಾಡಿ ಟೋಲ್‌ಗೇಟ್‌ ಒಳಗೆ ಮಂಗಳೂರು ಮಧ್ಯೆ ಸಂಚರಿಸುವ ಬಸ್‌, ಟೂರಿಸ್ಟ್‌ ವಾಹನ, ಲಾರಿ ಮತ್ತಿತರ ವಾಹನಗಳಿಗೆ ಟೋಲ್‌ ಪಾವತಿಸಬೇಕಾದ ಪ್ರಮೇಯವಿರುವುದಿಲ್ಲ.ಈ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಗುರುವಾರ ಉಡುಪಿ ಜಿಲ್ಲಾಡಳಿತಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿದೆ.

ಇದರಲ್ಲಿ ಮುಂದೆ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ತೊಡಕು ಉಂಟಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಏರಿಕೆಯಾದ ಸುಂಕದ ಬಳಿಕ ಯಾವುದೇ ಸಮಸ್ಯೆಯಾಗಿ ಟೋಲ್‌ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ಎನ್‌ಎಚ್‌ಎಐ ಜತೆಗಿನ ರಾಜ್ಯ ಸಹಕಾರ ಒಪ್ಪಂದದಂತೆ ನಷ್ಟವನ್ನು ರಾಜ್ಯವೇ ಭರಿಸಬೇಕು ಎಂದು ತಿಳಿಸಲಾಗಿದೆ.

ಈ ಜನವಿರೋಧಿ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ, “ಜನರ ಭಾವನೆ, ಕಷ್ಟ ಸುಖಗಳ ಅರಿವಿಲ್ಲದ ಸಂಸದ, ಶಾಸಕರು ಮಾತ್ರ ಹೀಗೆ ನಡೆದುಕೊಳ್ಳಲು ಸಾಧ್ಯ. ಮತ ಹಾಕುವ ಇಲ್ಲಿನ ಜನರಿಗಿಂತ ನವಯುಗ್‌ ಟೋಲ್‌ ಕಂಪೆನಿಯ ಹಿತ ಮಾತ್ರ ಅವರಿಗೆ ಮುಖ್ಯವಾಯಿತು. ಇದು ತುಳುನಾಡಿನ ಜನತೆಗೆ ಎಸಗಿದ ಮಹಾ ಮೋಸ. ಏಳು ವರ್ಷಗಳ ಕಾಲ ಸುರತ್ಕಲ್‌ ಟೋಲ್‌ ಗೇಟ್‌ನಲ್ಲಿ ಸಂಗ್ರಹಿಸಿದ ನೂರಾರು ಕೋಟಿ ರೂಪಾಯಿಗೆ ಬೆಲೆಯೇ ಇಲ್ಲವಾಗಿದೆ ಎಂದು ಹೇಳಿದೆ.

ಇತ್ತೀಚಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜನಾಕ್ರೋಶಕ್ಕೆ ಮಣಿದು ಟೋಲ್ ರದ್ದು ಮಾಡಿದ್ದೇವೆ ಎಂದು ಟ್ವೀಟ್ ಮಾಡಿದ್ದರು. ಆ ಬಳಿಕ ಹಲವು ಬಿಜೆಪಿ ಪಧಾಧಿಕಾರಿಗಳು ಕಾಂಗ್ರೆಸಿನವರ ಕಾಲದ ಟೋಲ್ ಬಿಜೆಪಿ ಕಾಲದಲ್ಲಿ ಹೋಯಿತು ಎಂದು ಪೋಸ್ಟ್ ಸ್ಟೇಟಸ್ ಹಾಕಿ ಕ್ರೆಡಿಟ್ ತೆಗೆದುಕೊಂಡಿದ್ದರು. ಇದು ಸಾರ್ವಜನಿಕವಾಗಿ ನಗೆಪಾಟಲಿಗೆ ಈಡಾಗಿತ್ತು. ಇದೀಗ ಟೋಲ್ ಬರಿಯ ದುಪ್ಪಟ್ಟು ಆಗಿರುವುದಲ್ಲಿ ಅಂದು ಕ್ರೆಡಿಟ್ ತೆಗೆದುಕೊಂಡವರು ಏನಂತಾರೋ ಕಾದು ನೋಡಬೇಕು.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments