Coastal

ಮಂಗಳೂರಿನಲ್ಲಿ ಎನ್‌ಐಎ ಶಾಖೆ ಸ್ಥಾಪನೆಗೆ ಕೇಂದ್ರದೊಂದಿಗೆ ಚರ್ಚೆ: ಗೃಹ ಸಚಿವ ಅರಗ ಜ್ಞಾನೇಂದ್ರ

ಮಂಗಳೂರು: ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಶಾಖೆಯನ್ನು ಸ್ಥಾಪನೆ ಕುರಿತು ಕೇಂದ್ರ ಸರ್ಕಾರದೊಡನೆ ಮಾತುಕತೆ ನಡೆಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಈ ಬಗ್ಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, “ಭಯೋತ್ಪಾದಕ ಸಂಘಟನೆಗಳ ಸಂಪರ್ಕವಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎನ್‌ಐಎ ಶಾಖೆಯನ್ನು ಸ್ಥಾಪಿಸುವಂತೆ ಕರಾವಳಿ ಪ್ರದೇಶದ ಶಾಸಕರು ಮನವಿ ಮಾಡಿದ್ದು, ಈ ಬೇಡಿಕೆಯನ್ನು ನಮ್ಮ ಸರ್ಕಾರ ಪರಿಗಣನೆಯಲ್ಲಿ ಇಟ್ಟಿದೆ. ಇತ್ತೀಚೆಗೆ ಉಳ್ಳಾಲ ಮತ್ತು ಭಟ್ಕಳದಲ್ಲಿ ಐಸಿಸ್ ಜೊತೆಗಿನ ಸಂಪರ್ಕದ ಆರೋಪದಡಿ ಎನ್ಐಎ ನಡೆಸಿದ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸರು ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ನಮ್ಮ ಕಡೆಯಿಂದ ಕಠಿಣ ಕ್ರಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆಯೂ ಚರ್ಚಿಸುತ್ತಿದ್ದೇವೆ” ಎಂದು ತಿಳಿಸಿದರು.

ಮಂಗಳೂರು ಕೇಂದ್ರಿತ ಕರ್ನಾಟಕ ಕರಾವಳಿ ಪ್ರದೇಶ ಭದ್ರತಾ ದೃಷ್ಟಿಯಿಂದ ಅತೀ ಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿ ಈ ಹಿಂದೆ ಹಲವಾರು ಉಗ್ರ ಸಂಪರ್ಕದ ಪ್ರಕರಣಗಳು ಪತ್ತೆಯಾಗಿವೆ ಹಾಗು ಪತ್ತೆಯಾಗುತ್ತಲೇ ಇದೆ. ಈ ಕಾರಣಕ್ಕಾಗಿ ಮಂಗಳೂರಿನಲ್ಲಿ ಎನ್‌ಐಎ ಸ್ಥಾಪನೆಗೆ ಬಹು ಹಿಂದಿನಿಂದಲೂ ಕೂಗು ಕೇಳಿ ಬರುತ್ತಿದೆ. ಇದೀಗ ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು ಈ ಬಾರಿಯಾದರೂ ಎನ್‌ಐಎ ಶಾಖೆ ಸ್ಥಾಪನೆಗೆ ಕೇಂದ್ರ ಗ್ರೀನ್ ಸಿಗ್ನಲ್ ನೀಡುವ ಆಶಾಭಾವನೆಯಿದೆ.

Exit mobile version