
ಶಿವಮೊಗ್ಗ: ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಸಂಜೆ ಮುಸ್ಲಿಂ ಮತಾಂಧರಿಂದ ಹತ್ಯೆಗೊಳಗಾದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಭೇಟಿ ಬಳಿಕ ಮಾತನಾಡಿದ ತೇಜಸ್ವೀ ಸೂರ್ಯ, “ಇದು ಕೇರಳ ಮಾದರಿಯ ಭಯೋತ್ಪಾದನೆಯಾಗಿದ್ದು, ಕರ್ನಾಟಕದಲ್ಲಿ ಬೆಳೆಯುತ್ತಿರುವ ಇಸ್ಲಾಮಿಕ್ ಮೂಲಭೂತವಾದದ ಪರಿಣಾಮವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇದು ಕೇರಳದ ಮಾದರಿಯ ಭಯೋತ್ಪಾದನೆಯಾಗಿದ್ದು, ಈ ರೀತಿಯ ಶೈಲಿಯನ್ನು ಪಿಎಫ್ಐ, ಎಸ್ಡಿಪಿಐ, ಸಿಎಫ್ಐ ಮುಂತಾದ ಸಂಘಟನೆಗಳು ಕರ್ನಾಟಕ ಮತ್ತು ದೇಶದ ಇತರ ಭಾಗಗಳಿಗೆ ಪಸರಿಸುತ್ತಿವೆ. ಆರೋಪಿಗಳ ವಿರುದ್ಧ ಭಯೋತ್ಪಾದನಾ ಆರೋಪಗಳನ್ನು ಹೊರಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ. ಯುಎಪಿಎ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಮತ್ತು ಇವುಗಳನ್ನು ಭಯೋತ್ಪಾದಕ ಕೃತ್ಯಗಳೆಂದು ಪರಿಗಣಿಸುವಂತೆ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಎಸ್ಪಿಗೆ ಮನವಿ ಮಾಡಿದ್ದೇನೆ” ಎಂದು ಸೂರ್ಯ ಹೇಳಿದರು.
ಘಟನೆ ಹಿನ್ನಲೆಯಲ್ಲಿ ಮಾಡಲೇಬೇಕಾದ ಒಟ್ಟು ನಾಲ್ಕು ಅತ್ಯಗತ್ಯ ಕಾರ್ಯಗಳ ಬಗ್ಗೆ ತಿಳಿಸಿದ ತೇಜಸ್ವೀ ಅವರು ಈ ಕುರಿತು ಬೆಂಗಳೂರಿಗೆ ಹಿಂತಿರುಗಿದ ನಂತರ ಮಾನ್ಯ ಮುಖ್ಯಮಂತ್ರಿಗಳಿಗೆ ದೀರ್ಘ ಪತ್ರ ಬರೆದು ವಿವರಿಸುವುದಾಗಿ ಹೇಳಿದರು. ಅವು ಮೊದಲನೆಯದು, ಹರ್ಷನ ಹತ್ಯೆಯನ್ನು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿ ಯುಎಪಿಎ16ರ ಅಡಿ ಕಾನೂನು ಕ್ರಮ ಜರುಗಿಸುವುದು. ಎರಡನೆಯದು, ಈ ರೀತಿಯ ಕೃತ್ಯಗಳು ಸೇರಿದಂತೆ ಭಯೋತ್ಪಾದನಾ ಕೃತ್ಯಗಳ ತನಿಖೆಗೆ ವಿಶೇಷ ಸಂಸ್ಥೆಯನ್ನು ಸ್ಥಾಪಿಸಿ ಮೇಲ್ವಿಚಾರಣೆಗೆ ದೊಡ್ಡದಾದ ತಂಡವನ್ನು ಸಜ್ಜುಗೊಳಿಸುವುದು. ಮೂರನೆಯದು, ಪಿಎಫ್ಐ-ಎಸ್ಡಿಪಿಐ-ಸಿಎಫ್ಐ ಅಂತಹ ಸಂಘಟನೆಗಳನ್ನು ನಿಷೇಧಿಸಲು ನೆರವಾಗುವಂತೆ ಸಂಘಟಿತ ಕ್ರೈಮ್ ಸಿಂಡಿಕೇಟ್ ಎಂದು ಘೋಷಿಸಲು KCOCA ಗೆ ತಿದ್ದುಪಡಿ ಮಾಡುವುದು. ನಾಲ್ಕನೆಯದು, ಪಿಎಫ್ಐ ಎಸ್ಡಿಪಿಐ ಅನ್ನು ನಿಷೇಧಿಸಲು ಭಾರತ ಸರಕಾರಕ್ಕೆ ವಿವರವಾದ ದಸ್ತಾವೇಜನ್ನು ಸಲ್ಲಿಸುವುದು.













































