
ಪಾಟ್ನಾ: ತನ್ನ ಬ್ಯಾಂಕ್ ಖಾತೆಗೆ ತಪ್ಪಾಗಿ ಬಂದ ಐದೂವರೆ ಲಕ್ಷ ಹಣವನ್ನು ಇದು ಮೋದಿ ಕಳುಹಿಸಿದ ಹಣ ಎಂದು ಹಿಂದಿರುಗಿಸಲು ಒಪ್ಪದೆ ಪಟ್ಟು ಹಿಡಿದ ವಿಚಿತ್ರ ಘಟನೆ ಬಿಹಾರದ ಖಗಾರಿಯ ಜಿಲ್ಲೆಯಲ್ಲಿ ನಡೆದಿದೆ.
ಬಿಹಾರದ ಖಗಾರಿಯ ಜಿಲ್ಲೆಯ ಮಾನ್ಸಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಭಕ್ತಿಯಾರ್ ಪುರ್ ಗ್ರಾಮದ ರಂಜಿತ್ ದಾಸ್ ಎಂಬ ವ್ಯಕ್ತಿಗೆ ಖಗಾರಿಯದ ಗ್ರಾಮೀಣ ಬ್ಯಾಂಕಿನಿಂದ ಐದೂವರೆ ಲಕ್ಷ ತಪ್ಪಾಗಿ ವರ್ಗಾವಣೆಯಾಗಿತ್ತು. ಈ ಬಗ್ಗೆ ಹಲವು ಬಾರಿ ನೋಟೀಸ್ ನೀಡಿದ್ದರೂ ರಂಜಿತ್ ಹಣವನ್ನು ಹಿಂದಿರುಗಿಸಲಿಲ್ಲ. ಬದಲಾಗಿ ಬಂದ ಎಲ್ಲ ಹಣವನ್ನು ಖರ್ಚು ಮಾಡಿದ್ದಾನೆ.
‘ಮೋದಿ ಪ್ರತಿಯೊಬ್ಬರಿಗೂ 15 ಲಕ್ಷ ಹಾಕುತ್ತೇನೆ ಎಂದಿದ್ದು ಆ ಹಣದ ಮೊದಲ ಕಂತು ಇದಾಗಿರಬಹುದು ಎಂದು ಭಾವಿಸಿ ತಾನು ಆ ಹಣವನ್ನು ಖರ್ಚು ಮಾಡಿದ್ದೇನೆ. ಈಗ ವಾಪಸು ಕೊಡಲು ತನ್ನ ಬಳಿ ಹಣವಿಲ್ಲ’ ಎಂದು ರಂಜಿತ್ ದಾಸ್ ಹೇಳುತ್ತಿದ್ದಾನೆ. ಈಗ ಹಣ ಹಿಂತಿರುಗಿಸದ ಕಾರಣಕ್ಕೆ ಬ್ಯಾಂಕ್ ಮ್ಯಾನೇಜರ್ ದೂರಿನ ಮೇರೆಗೆ ರಂಜಿತ್ ದಾಸ್’ನನ್ನು ಬಂಧಿಸಲಾಗಿದೆ.