Movie

ಆಗಸ್ಟ್ 20ರಿಂದ ‘ಮಹಾನಾಯಕ’ದಲ್ಲಿ ಅಂಬೇಡ್ಕರ್ ಜೀವನದ ಮತ್ತೊಂದು ಘಟ್ಟ

ಬೆಂಗಳೂರು : ಜೀ ಕನ್ನಡ ಟೆಲಿವಿಷನ್ ನಲ್ಲಿ ಪ್ರಸಾರವಾಗುತ್ತಿರುವ ಅಂಬೇಡ್ಕರ್ ಜೀವನ ಕುರಿತಾದ ‘ಮಹಾನಾಯಕ’ ಧಾರವಾಹಿ ಭಾರೀ ಜನಪ್ರಿಯತೆ ಗಳಿಸಿದ್ದು ಬಾಲಕ ಅಂಬೇಡ್ಕರ್ ಜೀವನ ಕತೆ ನೋಡಿ ಕನ್ನಡಿಗರು ಈಗಾಗಲೇ ಥ್ರಿಲ್ ಆಗಿದ್ದಾರೆ. ಇನ್ನು ಮುಂದೆ ಮಹಾನಾಯಕದಲ್ಲಿ ಬಾಲಕ ಅಂಬೇಡ್ಕರ್ ನ ನಂತರದ ಜೀವನದ ಅಂದರೆ ಹೈಸ್ಕೂಲ್ ಹಾಗು ಕಾಲೇಜು ದಿನಗಳ ಕುರಿತಾದ ಸಂಚಿಕೆ ಪ್ರಸಾರವಾಗಲಿದೆ.

ಅಂಬೇಡ್ಕರ್ ಜೀವನದ ಮತ್ತೊಂದು ಘಟ್ಟದ ಕತೆಯನ್ನು ತೋರಿಸಲು ಜೀ ಕನ್ನಡ ತಯಾರಾಗಿದ್ದು ಇದೇ ಆಗಸ್ಟ್ 20ರಿಂದ ನೂತನ ಎಪಿಸೋಡುಗಳು ಪ್ರಸಾರವಾಗಲಿವೆ. ಅದಕ್ಕೂ ಪೂರ್ವಭಾವಿಯಾಗಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೂತನ ಸಂಚಿಕೆಗಳ ಪ್ರೋಮೋವನ್ನು ಬಿಡುಗಡೆಗೊಳಿಸಿದರು. ಅಂಬೇಡ್ಕರ್ ನ ಬಾಲ್ಯದ ಪಾತ್ರ ನಿರ್ವಹಿಸುತ್ತಿದ್ದ ಬಾಲಕನ ಪಾತ್ರ ಇಲ್ಲಿಗೆ ಅಂತ್ಯವಾಗಲಿದ್ದು ಬೆಳೆದು ನಿಂತ ಅಂಬೇಡ್ಕರ್ ಪಾತ್ರಕ್ಕೆ ಹೊಸ ಕಲಾವಿದನ ಪ್ರವೇಶವಾಗಿದೆ.

ಈ ಬಗ್ಗೆ ಮಾತನಾಡಿದ ಜೀ ಕನ್ನಡದ ರಾಘವೇಂದ್ರ ಹುಣಸೂರು, ಕೊರೊನ ಸಾಂಕ್ರಾಮಿಕ ಸಮಯದಲ್ಲಿ ಕೂಡ ಜನರು ಮಹಾನಾಯಕನನ್ನು ಪ್ರತಿದಿನ ತಪ್ಪದೇ ವೀಕ್ಷಿಸುತ್ತಿದ್ದರು. ನಮ್ಮ ನಿಷ್ಠಾವಂತ ವೀಕ್ಷಕರ ಪ್ರೋತ್ಸಾಹದಿಂದ, ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮದ ಸಮಯದಲ್ಲಿ ನಮ್ಮ ಪ್ರೇಕ್ಷಕರಿಗೆ ಕೃತಜ್ಞತೆಯಾಗಿ, ಮಹಾನಾಯಕರ ಜೀವನ ಪಯಣದಲ್ಲಿ ಮುಂದಿನ ಹಂತಕ್ಕೆ ಹೋಗಲು ನಮಗೆ ಅಪಾರ ಸಂತೋಷವಾಗುತ್ತಿದೆ ಎಂದು ಹೇಳಿದರು.

ಆಗಸ್ಟ್ 20 ರಿಂದ ‘ಮಹಾನಾಯಕ’ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

Exit mobile version