
ಮುಂಬಯಿ : ಇತ್ತೀಚೆಗೆ ಸಲ್ಮಾನ್ ಖಾನ್ ತಮಿಳಿನ ಹಿಟ್ ಚಿತ್ರ ಮಾಸ್ಟರ್ ನ ಹಿಂದಿ ರಿಮೇಕ್ ನಲ್ಲಿ ಅಭಿನಯಿಸುತ್ತಾರೆ ಅನ್ನುವ ಸುದ್ದಿ ಹಬ್ಬಿತ್ತು. ಈ ಕುರಿತು ಸಲ್ಲು ಅಭಿಮಾನಿಗಳು ಕೂಡ ಕಾತರರಾಗಿದ್ದರು. ಆದರೆ ಇದೀಗ ಸಲ್ಮಾನ್ ಖಾನ್ ಮಾಸ್ಟರ್ ರಿಮೇಕಿಗೆ ಒಲ್ಲೆ ಅಂದಿದ್ದಾರೆ ಎನ್ನಲಾಗಿದೆ.
ಬಹುನಿರೀಕ್ಷಿತ ರಾಧೆ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ ನಂತರ ಸಲ್ಲು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾಗಾಗಿ ಕುತೂಹಲದಿಂದ ಕಾಯುತ್ತಿದ್ದರು. ಇನ್ನೇನು ಮಾಸ್ಟರ್ ರಿಮೇಕ್ ನಲ್ಲಿ ಸಲ್ಲು ಕಾಣಿಸಿಕೊಂಡು ಮರಳಿ ಹಿಟ್ ಟ್ರಾಕ್ ಗೆ ಮರಳುತ್ತಾರೆ ಎಂದು ಕಾದಿದ್ದ ಅಭಿಮಾನಿಗಳಿಗೆ ಈಗ ನಿರಾಸೆಯಾಗಿದೆ. ಸಲ್ಲು ರಿಮೇಕ್ ಮಾಡಿದ ಹೆಚ್ಚಿನ ಎಲ್ಲ ದಕ್ಷಿಣ ಭಾರತೀಯ ಚಿತ್ರಗಳು ಹಿಟ್ ಆಗಿವೆ ಎನ್ನುವುದು ವಿಶೇಷ.
ತಮಿಳಿನ ಮಾಸ್ಟರ್ ಸಿನೆಮಾದಲ್ಲಿ ವಿಜಯ್ ಅವರು ನಟಿಸಿದ್ದರು. ವಿಜಯ್ ಗೆ ಸರಿಸಮನಾಗಿ ವಿಜಯ್ ಸೇತುಪತಿ ಕೂಡ ಕಾಣಿಸಿಕೊಂಡಿದ್ದರು. ಕೋವಿಡ್ ಅವಾಂತರಗಳ ಹೊರತಾಗಿಯೂ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರದ ಹಿಂದಿ ಹಕ್ಕುಗಳಿಗಾಗಿ ಹಲವು ನಿರ್ಮಾಪಕರು ಪ್ರಯತ್ನಿಸುತ್ತಿದ್ದು ಸಲ್ಮಾನ್ ಖಾನ್ ಅವರನ್ನು ಮುಖ್ಯ ಭೂಮಿಕೆಯಲ್ಲಿ ತರಲು ಕನಸು ಕಾಣುತ್ತಿದ್ದರು. ಇದೀಗ ಅವರಿಗೆ ಹಿನ್ನಡೆಯಾಗಿದ್ದು ಬೇರೆ ನಾಯಕ ನಟನನ್ನು ಹುಡುಕಬೇಕಾಗಿದೆ.
ಸಲ್ಮಾನ್ ಖಾನ್ ಬಳಿ ಈಗ ಕಿಕ್-2, ಟೈಗರ್-3 , ಕಭಿ ಈದ್ ಕಭಿ ದಿವಾಳಿ ಚಿತ್ರಗಳು ಇದ್ದು ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದೆ.