National

ರಸ್ತೆ ಗುಂಡಿಯಿಂದಾಗಿ ಉರುಳಿ ಬಿದ್ದ ಟೆಕ್ಕಿ ಯುವತಿ ಮೇಲೆ ಹರಿದ ಲಾರಿ: 22 ವರ್ಷದ ಯುವತಿ ದಾರುಣ ಸಾವು

ಚೆನ್ನೈ: ಗುಂಡಿ ರಸ್ತೆಯಿಂದಾಗಿ ನಿಯಂತ್ರಣ ತಪ್ಪಿ ಸ್ಕೂಟಿಯಿಂದ ಕೆಳಗೆ ಬಿದ್ದ 22 ವರ್ಷದ ಟೆಕ್ಕಿ ಯುವತಿ ಮೇಲೆ ಲಾರಿ ಹರಿದು ಯುವತಿ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದ ಘಟನೆ ಇಂದು ನಡೆದಿದೆ.

ಚೆನ್ನೈನ ಟೆಕ್ ಕಂಪನಿ ಝೋಹೋದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 22 ವರ್ಷದ ಶೋಭನಾ ಮೃತ ಯುವತಿಯಾಗಿದ್ದಾಳೆ. ಆಕೆ ತನ್ನ ಸಹೋದರನನ್ನು ನೀಟ್ ಕೋಚಿಂಗ್ ತರಗತಿಗಾಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಬಿಟ್ಟು ಬರಲು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆಕೆಯ ಸಹೋದರನಿಗೆ ಕೂಡ ಗಾಯಗಳಾಗಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತ ಸಂದರ್ಭ ಶೋಭನಾ ಹಾಗೂ ಆಕೆಯ ಸಹೋದರ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಿಂದ ಪರಾರಿಯಾಗಿದ್ದ ಲಾರಿ ಚಾಲಕನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಾಗಿದೆ. ಘಟನೆಯ ನಂತರ ಅಧಿಕಾರಿಗಳು ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ.

ಶೋಭನಾ ಕೆಲಸ ಮಾಡುತ್ತಿದ್ದ ಜೋಹೊ ಕಂಪನಿ ಸಿಇಒ ಶ್ರೀಧರ್ ವೆಂಬು ಅವರು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿ ಶೋಭನಾ ಅವರ ಸಾವಿಗೆ ಚೆನ್ನೈನ ಹದಗೆಟ್ಟ ರಸ್ತೆಗಳನ್ನು ದೂಷಿಸಿದ್ದಾರೆ. ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿರುವ ವೆಂಬ ಅವರು ‘ನಮ್ಮ ಇಂಜಿನಿಯರ್ ಶೋಭನಾ ಅವರು ಚೆನ್ನೈನ ಮಧುರವಾಯಲ್ ಬಳಿ ಭಾರೀ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸ್ಕೂಟರ್ ಸ್ಕಿಡ್ ಆಗಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಅವರ ಕಿರಿಯ ಸಹೋದರನನ್ನು ಶಾಲೆಗೆ ಕರೆದೊಯ್ಯುತ್ತಿದ್ದರು. ನಮ್ಮ ಕೆಟ್ಟ ರಸ್ತೆಗಳು ಅವರ ಕುಟುಂಬಕ್ಕೆ ದುರಂತ ನಷ್ಟವನ್ನುಂಟುಮಾಡಿದೆ” ಎಂದು ಹೇಳಿಕೊಂಡಿದ್ದಾರೆ.

Exit mobile version