
ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ 40 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದು, ಕಾಂಗ್ರೆಸ್ಸಿನ ಸ್ಟಾರ್ ಲೀಡರ್ ರಾಹುಲ್ ಗಾಂಧಿ ಮತ್ತೆ ಕೇರಳದ ವಯನಾಡ್’ನಿಂದ ಸ್ಪರ್ಧಿಸಲಿದ್ದಾರೆ. ಅವರು ಕರ್ನಾಟಕ ಅಥವಾ ತೆಲಂಗಾಣದಿಂದ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹಕ್ಕೆ ಈ ಮೂಲಕ ತೆರೆ ಬಿದ್ದಿದೆ.
ರಾಹುಲ್ ಗಾಂಧಿ ಸೇರಿ ಒಟ್ಟು 40 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಗುರುವಾರ ಅಂತಿಮಗೊಳಿಸಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಇಸಿ ಸಭೆಯಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 60 ಲೋಕಸಭಾ ಸ್ಥಾನಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ಚರ್ಚೆ ನಡೆದ 60ರಲ್ಲಿ 40 ಸ್ಥಾನಗಳನ್ನು ಅಂತಿಮಗೊಳಿಸಲಾಗಿದೆ.
ದೆಹಲಿ, ಕರ್ನಾಟಕ, ಕೇರಳ, ಛತ್ತೀಸ್‌ಗಢ, ತೆಲಂಗಾಣ, ಸಿಕ್ಕಿಂ, ತ್ರಿಪುರ, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ ಮತ್ತು ಲಕ್ಷ್ವದೀಪ್‌ನಲ್ಲಿ ಲೋಕಸಭೆ ಸ್ಥಾನಗಳ ಕುರಿತು ಚರ್ಚೆಗಳು ನಡೆದವು ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಸ್ಪರ್ಧಿಸುವ ಕೇರಳದಲ್ಲಿ ಕಾಂಗ್ರೆಸ್ ಪಕ್ಷವು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉಳಿದ ನಾಲ್ಕು ಸ್ಥಾನಗಳನ್ನು ಕಾಂಗ್ರೆಸ್ ಮಿತ್ರಪಕ್ಷಗಳಿಗೆ ನೀಡಲಾಗಿದೆ.