
ಕಾಬೂಲ್ : ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಾಲಿಬಾನಿಗೆ ಶರಣಾಗಿ ಪಲಾಯನಗೊಂಡ ಒಂದು ದಿನದ ಒಳಗೆ ಅಧ್ಯಕ್ಷರ ಅರಮನೆಯನ್ನು ಸೀಜ್ ಮಾಡಲಾಗಿದೆ. ಕಾಬೂಲಿನ ಎಲ್ಲ ಪ್ರದೇಶಗಳು ಈಗ ತಾಲಿಬಾನ್ ಹಿಡಿತದಲ್ಲಿದ್ದು ಅಲ್ಲಲ್ಲಿ ತಾಲಿಬಾನಿಗಳು ಗಸ್ತು ತಿರುಗುತ್ತಿದ್ದಾರೆ. ಇದರ ಮಧ್ಯೆ ದೇಶದೊಳಗಿನ ವಾಯುಪ್ರದೇಶವನ್ನು ವಾಣಿಜ್ಯ ಉದ್ಧೇಶಗಳಿಗೆ ಬಂದ್ ಮಾಡಲಾಗಿದೆ.
ವಾಣಿಜ್ಯ ವಿಮಾನಗಳಿಗೆ ಅಫ್ಘಾನಿಸ್ತಾನ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು ವಿಮಾನಯಾನ ಮೂಲಗಳು ತಿಳಿಸಿದೆ. ಅಮೆರಿಕದಿಂದ ಭಾರತಕ್ಕೆ ಬರುವ ಏರ್ ಇಂಡಿಯಾ ವಿಮಾನಗಳನ್ನು ಅಫ್ಘಾನ್ ವಾಯುಪ್ರದೇಶಕ್ಕೆ ಪ್ರವೇಶಿಸದಂತೆ ಬೇರೆಡೆಗೆ ತಿರುಗಿಸಲಾಗುತ್ತಿದೆ. ಪರಿಣಾಮ ಪ್ರಯಾಣದ ಅವಧಿ ಹೆಚ್ಚಳವಾಗಲಿದೆ. ಅಮೆರಿಕದಿಂದ ಭಾರತಕ್ಕೆ ಬರುವ ವಿಮಾನಗಳು ದೋಹಾ ಅಥವಾ ಯುಎಇಗೆ ತಿರುಗುತ್ತವೆ ಮತ್ತು ಅಲ್ಲಿ ಇಂಧನ ತುಂಬಿದ ಬಳಿಕ ದೆಹಲಿಗೆ ಪ್ರಯಾಣ ಬೆಳೆಸುತ್ತವೆ.
ಅಫ್ಘಾನಿಸ್ತಾನದ ಕಾಬೂಲ್ ದೆಹಲಿ ನಡುವಿನ ವಿಮಾನ ಸಂಚಾರವನ್ನು ನಿಲ್ಲಿಸಲಾಗಿದೆ. ಸೋಮವಾರ ದೆಹಲಿಗೆ ಹಾರಬೇಕಿದ್ದ ಕಾಬೂಲ್ ದೆಹಲಿ ವಿಮಾನ ಏರ್‌ಬಸ್ A320ನಲ್ಲಿ ಸೀಟು ಕಾಯ್ದಿರಿಸಿದ್ದ 33 ಪ್ರಯಾಣಿಕರು ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪಲು ಸಾಧ್ಯವಾಗಲಿಲ್ಲ. ‘ಅಫ್ಘಾನ್ ವಾಯುಪ್ರದೇಶವನ್ನು ಅನಿಯಂತ್ರಿತ ಎಂದು ಘೋಷಿಸಲಾಗಿದೆ. ಆ ಕಾರಣದಿಂದಾಗಿ ಕಾಬೂಲ್ ವಿಮಾನವನ್ನು ರದ್ದುಗೊಳಿಸಬೇಕಾಯಿತು’, ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಫ್ಘಾನಿ ಮತ್ತು ವಿದೇಶಿ ನಾಗರಿಕರು ದೇಶವನ್ನು ತೊರೆಯಲು ಯತ್ನಿಸಿದ ಕಾರಣ ಜನಸಾಗರವೇ ಉಂಟಾಗಿದ್ದು ದೇಶ ತೊರೆಯಲು ಜನರು ಮುಗಿಬೀಳುತ್ತಿರುವ ದೃಶ್ಯ ಕಂಡು ಬರುತ್ತಿದೆ. ಈ ಸಂದರ್ಭ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.












































