
ಇಸ್ಲಾಮಾಬಾದ್: ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಪ್ರಧಾನಿ ಹುದ್ದೆಯ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು ಸೋಮವಾರ ಪ್ರಧಾನಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೊಸ ಪ್ರಧಾನಿ ಆಯ್ಕೆ ಬಗ್ಗೆ ವಿರೋಧ ವ್ಯಕ್ತ ಪಡಿಸಿರುವ ನಿರ್ಗಮಿತ ಪ್ರಧಾನಿ ಇಮ್ರಾನ್ ಖಾನ್ ಪಕ್ಷವು ಸಂಸತ್ತನ್ನು ತೊರೆದು ಪ್ರಾಂತೀಯ ಅಸೆಂಬ್ಲಿಗಳಾದ್ಯಂತ ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಬೆದರಿಕೆ ಹಾಕಿದೆ.
ಶೆಹಬಾಜ್ ಷರೀಫ್ ಅವರು ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಸಹೋದರರಾಗಿದ್ದಾರೆ. 70 ವರ್ಷದ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಜಾತಿ ಉಮ್ರಾ ಗ್ರಾಮದ ಶ್ರೀಮಂತ ಕುಟುಂಬದ ವಂಶಸ್ಥರಾದ ಶೆಹಬಾಜ್ ಅವರು ಪ್ರಧಾನಿ ಹುದ್ದೆ ಚುನಾವಣೆಯಲ್ಲಿ ಮಾಜಿ ವಿದೇಶಾಂಗ ಸಚಿವ ಮತ್ತು ಪಿಟಿಐ ನಾಮನಿರ್ದೇಶಿತ ಶಾ ಮೆಹಮೂದ್ ಖುರೇಷಿ ವಿರುದ್ಧ ಸ್ಪರ್ಧಿಸಲಿದ್ದಾರೆ.
ಕಾಕತಾಳೀಯ ಎಂಬಂತೆ ಶೆಹಬಾಜ್ ಷರೀಫ್ ಮತ್ತು ಅವರ ಮಗ ಹಮ್ಜಾ ಶೆಹಬಾಜ್ ಅದೇ ದಿನ ಮನಿ ಲಾಂಡರಿಂಗ್ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ. ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ವಿಶೇಷ ನ್ಯಾಯಾಲಯವು ಏಪ್ರಿಲ್ 4 ರಂದು ಶೆಹಬಾಜ್, ಅವರ ಮಗ ಮತ್ತು ಇತರ ನಾಲ್ವರಿಗೆ ಸಮನ್ಸ್ ಜಾರಿ ಮಾಡಿತ್ತು. ಶೆಹಬಾಜ್ ಅವರ ವಕೀಲ ಅಮ್ಜದ್ ಪರ್ವೇಜ್ ಅವರು ತಮ್ಮ ಕಕ್ಷಿದಾರರು ವೈಯಕ್ತಿಕವಾಗಿ ಹಾಜರಾಗುವುದರಿಂದ ವಿನಾಯಿತಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
14 ಶತಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ದೋಷಾರೋಪಣೆ ಹೊಂದಿರುವ ವ್ಯಕ್ತಿಗೆ ಆ ದಿನವೇ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಅವಕಾಶ ನೀಡಿರುವುದು “ದೊಡ್ಡ ಅನ್ಯಾಯ” ಎಂದು ಮಾಜಿ ಮಾಹಿತಿ ಸಚಿವ ಫವಾದ್ ಚೌಧರಿ ಹೇಳಿದ್ದಾರೆ. ಅವಿಶ್ವಾಸ ಮತದಿಂದ ಪದಚ್ಯುತಗೊಂಡ ಮೊದಲ ಪಾಕಿಸ್ತಾನದ ಪ್ರಧಾನಿ ಎಂಬ ಅಪಕೀರ್ತಿಯನ್ನು ಇಮ್ರಾನ್ ಮೇಲೆ ಹೇರಿದ ಪ್ರತಿಪಕ್ಷಗಳ ನಡೆ, ವಿದೇಶಿ ಶಕ್ತಿಯಿಂದ ರೂಪಿಸಲಾದ ಬಹಳ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಇಮ್ರಾನ್ ಖಾನ್ ಸಂಪುಟದಲ್ಲಿ ಸಚಿವರಾಗಿದ್ದ ಚೌಧರಿ ಹೇಳಿದ್ದಾರೆ.