
ನವದೆಹಲಿ: ಭಾರತೀಯ ರಕ್ಷಣಾ ಇಲಾಖೆ ಸುಮಾರು 3000 ಕೋಟಿ ವೆಚ್ಚದಲ್ಲಿ ಡಿ.ಆರ್.ಡಿ.ಓ ಅಭಿವೃದ್ಧಿ ಪಡಿಸಿರುವ ಅಸ್ತ್ರ ಕ್ಷಿಪಣಿಗಳನ್ನು ಖರೀದಿಸಲಿದೆ. ಇವುಗಳನ್ನು 2001ನೇ ವರ್ಷದಲ್ಲಿ ಅಭಿವೃದ್ಧಿಪಡಿಸಲು ಪ್ರಾರಂಭಿಸಲಾಯಿತು. 2014 ರಲ್ಲಿ ಅಸ್ತ್ರ ಕ್ಷಿಪಣಿಯ ಮೊದಲ ಪರೀಕ್ಷೆ ನಡೆಯಿತು. 2017 ರಲ್ಲಿ ಅಸ್ತ್ರ ಕ್ಷಿಪಣಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಯಿತು.
ಇದರಲ್ಲಿ ಎರಡು ಆವೃತ್ತಿಗಳಿದ್ದು ಅಸ್ತ್ರ ಎಂಕೆ 1 ಸುಮಾರು 110 ಕಿಮೀ ವ್ಯಾಪ್ತಿಯನ್ನು ಹೊಂದಿದ್ದರೆ, ಅಸ್ತ್ರ ಎಂಕೆ 2 ಸುಮಾರು 160 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಇವುಗಳನ್ನು ಸುಖೋಯ್ 30 ಎಂಕೆ1, ಮಿಗ್ 29, ತೇಜಸ್ ಯುದ್ಧ ವಿಮಾನಗಳಿಗೆ ಅಳವಡಿಸಲಾಗುತ್ತದೆ. ಅಸ್ತ್ರ ಕ್ಷಿಪಣಿಗಳನ್ನು ಸಂಪೂರ್ಣ ದೇಶೀಯ ತಂತ್ರಜ್ಞಾನದಿಂದ ತಯಾರಿಸಲಾಗಿದ್ದು, ಆಕಾಶದಿಂದ ಆಕಾಶಕ್ಕೆ ನೆಗೆಯುವ ಗುಂಪಿಗೆ ಸೇರಿವೆ.
ಸರಕಾರಿ ಸ್ವಾಮ್ಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಕಂಪನಿ ಇವುಗಳ ಉತ್ಪಾದನೆಯನ್ನು ಮಾಡಲಿದೆ. ಅಸ್ತ್ರ ಕ್ಷಿಪಣಿಗಳು ಮ್ಯಾಕ್ 4.5 ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ. ಇವು ಭಾರತೀಯ ಸೇನೆಗೆ ಸೇರುವ ಮೂಲಕ ಸೇನಾ ಬಲ ಮತ್ತಷ್ಟು ಹೆಚ್ಚಾಗಲಿದೆ.