
ಲಕ್ನೋ: ಸರಿಯಾದ ಸಮಯದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ಉತ್ತರ ಪ್ರದೇಶದಲ್ಲಿ ಜಾರಿಗೆ ಬರಲಿದೆ. ಈ ಕಾನೂನಿಗೆ ಹೆಚ್ಚು ದಿನ ಕಾಯುವ ಅಗತ್ಯ ಬರುವುದಿಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಎಲ್ಲವನ್ನೂ ಸರಿಯಾದ ಸಮಯದಲ್ಲಿ ಮಾಡಲಾಗುವುದು. ಇಲ್ಲಿಯವರೆಗೆ ರಾಮ ಮಂದಿರ ಯಾವಾಗ ಕಟ್ಟುತ್ತೀರಿ ಎಂದು ಕೇಳುತ್ತಿರಲಿಲ್ಲವೇ. ಈಗ ಮಂದಿರ ನಿರ್ಮಾಣ ಆರಂಭವಾಗಿದೆ. ಈಗ ಆ ಪ್ರಶ್ನೆ ಕೇಳುತ್ತಿದ್ದವರಿಗೆ ಖುಷಿಯಾಗಿರಬೇಕು. ಆರ್ಟಿಕಲ್ 370 ರದ್ದು ಬಗ್ಗೆಯೂ ಅನುಮಾನ ವ್ಯಕ್ತಪಡಿಸುತ್ತಿದ್ದರು. ಅದನ್ನೂ ಮಾಡಿಯಾಯಿತು. ಮಾನ್ಯ ಪ್ರಧಾನಿ ಮೋದಿಜಿ ಹಾಗು ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕಲಂ 370 ಅನ್ನು ರದ್ದು ಮಾಡಿದರು. ಜತೆಗೆ ಜಮ್ಮು ಕಾಶ್ಮೀರ ಹಾಗು ಲಡಾಕ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದರು ಎಂದು ಯೋಗಿ ಹೇಳಿದರು.
ಈಗ ಜನಸಂಖ್ಯಾ ನಿಯಂತ್ರಣದ ಬಗ್ಗೆಯೂ ಅದೇ ರೀತಿಯ ಪ್ರಶ್ನೆ ಕೇಳುತ್ತಿದ್ದಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಕಾಯ್ದೆ ಬಂದೆ ಬರಲಿದೆ ಎಂದು ಯೋಗಿ ಆದಿತ್ಯನಾಥ್ ಮಾಧ್ಯಮವೊಂದರ ಜತೆ ಮಾತನಾಡುತ್ತಾ ಹೇಳಿದರು.