
ಕೊಲಂಬೋ: ಆರ್ಥಿಕ ದಿವಾಳಿಯಂಚಿಗೆ ಸಾಗಿರುವ ಶ್ರೀಲಂಕಾದಲ್ಲಿ ರಾಷ್ಟ್ರ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಶುಕ್ರವಾರ ವಿಶೇಷ ಗೆಜೆಟ್ ಮೂಲಕ ತಕ್ಷಣವೇ ಜಾರಿಗೆ ಬರುವಂತೆ ಸಾರ್ವಜನಿಕ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಇದರ ಜತೆಗೆ ಶ್ರೀಲಂಕಾ ಪಶ್ಚಿಮ ಪ್ರಾಂತ್ಯದಲ್ಲಿ ಆರು ಗಂಟೆಗಳ ಕಾಲ ಪೊಲೀಸ್ ಕರ್ಫ್ಯೂ ವಿಧಿಸಲಾಗಿದೆ.
ಸಾರ್ವಜನಿಕರ ಭದ್ರತೆ ಮತ್ತು ಜನರಿಗೆ ಅಗತ್ಯ ಸೇವೆಗಳನ್ನು ಪೂರೈಸುವ ಸಲುವಾಗಿ ತಕ್ಷಣಕ್ಕೆ ಕ್ರಮ ಕೈಗೊಳ್ಳಲು ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ ಎಂದು ಶ್ರೀಲಂಕಾದ ಡೈಲಿ ಮಿರರ್ ಮಾಧ್ಯಮ ಮಾಡಿದೆ.1959ರ ಸಂ. 8. 1978 ರ ಕಾನೂನು ಸಂಖ್ಯೆ 6 ಮತ್ತು 1988 ರ ಆಕ್ಟ್, ನಂ.28 ರಡಿಯಲ್ಲಿ ಗೆಜೆಟ್ ಹೊರಡಿಸಲಾಗಿದೆ.
ಹಲವಾರು ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ನಿವಾಸದ ಹೊರಗೆ ಜಮಾಯಿಸಿದ್ದ ಕಾರಣ ಪಶ್ಚಿಮ ಪ್ರಾಂತ್ಯದಲ್ಲಿ ಕಳೆದ ಮಧ್ಯರಾತ್ರಿಯಿಂದ ಇಂದು ಬೆಳಗ್ಗೆ 6 ಗಂಟೆಯವರೆಗೆ ಪೊಲೀಸ್ ಕರ್ಫ್ಯೂ ವಿಧಿಸಲಾಗಿತ್ತು. ಮಿರಿಹಾನದಲ್ಲಿರುವ ಅಧ್ಯಕ್ಷ ರಾಜಪಕ್ಸೆ ಅವರ ನಿವಾಸದ ಹೊರಗೆ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಪ್ರತಿಭಟನೆಯ ನಂತರ, ಪತ್ರಕರ್ತರು ಸೇರಿದಂತೆ ಕನಿಷ್ಠ ಹತ್ತು ಜನರು ಗಾಯಗೊಂಡರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಕಾರಣ 45 ಮಂದಿಯನ್ನು ಬಂಧನ ಮಾಡಲಾಗಿದೆ.
ಪ್ರವಾಸೋದ್ಯಮ ಕ್ಷೇತ್ರದ ಕುಸಿತದಿಂದಾಗಿ ಹಾಗು ಕೊರೋನಾ ಕಾರಣದಿಂದಾಗಿ ಶ್ರೀಲಂಕಾವು ಪ್ರಸ್ತುತ ವಿದೇಶಿ ವಿನಿಮಯ ಕೊರತೆಯನ್ನು ಎದುರಿಸುತ್ತಿದೆ. ಇದರಿಂದ ದೇಶದಲ್ಲಿ ಆಹಾರ, ಇಂಧನ, ವಿದ್ಯುತ್ ಮತ್ತು ಅನಿಲದ ಕೊರತೆ ಸೃಷ್ಟಿಯಾಗಿದೆ. ತಕ್ಷಣಕ್ಕೆ ಭಾರತ ನೆರವಾಗುತ್ತಿದ್ದು ಲಂಕಾದ ಆಸ್ಪತ್ರೆಗಳಿಗೆ ಬೇಕಾದ ಔಷಧಿ ಹಗಲು ಉಪಕರಣಗಳನ್ನು ಭಾರತ ಸರಬರಾಜು ಮಾಡುತ್ತಿದೆ. ಜತೆಗೆ ಭಾರತೀಯ ಬ್ಯಾಂಕ್ ಎಸ್.ಬಿ.ಐ ಕೂಡ ಸಾಲದ ರೂಪದಲ್ಲಿ ಲಂಕಾಗೆ ಸಹಾಯ ಮಾಡುತ್ತಿದೆ.